Saturday, 4 August 2012

'ಆಪ್ತಮಿತ್ರ' ಸೌಂದರ್ಯಾಗೆ ಉಪ್ಪಿ 'ಗಾಡ್‌ಫಾದರ್' ಹೋಲಿಕೆ!


'ಆಪ್ತಮಿತ್ರ' ಚಿತ್ರದಲ್ಲಿ ನಿಜವಾಗಿ ಗಮನ ಸೆಳೆಯುವುದೇ ಸೌಂದರ್ಯಾರ ನೃತ್ಯ. ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದವರಂತೆ ಸೌಂದರ್ಯಾ ನಟಿಸಿದ್ದರು. ಎಲ್ಲೂ ಅಸಹತೆಯ ಕುರುಹುಗಳಿರಲಿಲ್ಲ. ಹಾಗಾಗಿಯೇ ಆ ಚಿತ್ರದ ಹಾಡು ಈಗಲೂ ಜನಪ್ರಿಯ. ಎಷ್ಟು ನೋಡಿದರೂ ಬೋರ್ ಆಗದಂತಹ ನೃತ್ಯ.

ಈಗ 'ಆಪ್ತಮಿತ್ರ'ದ ಸೌಂದರ್ಯಾರನ್ನು ಸ್ಮರಿಸಲು ಕಾರಣ ರಿಯಲ್ ಸ್ಟಾರ್ ಉಪೇಂದ್ರರ ಭರತನಾಟ್ಯ. 'ಗಾಡ್‌ಫಾದರ್' ಚಿತ್ರದಲ್ಲಿ ಅವರ ಹೆಣ್ಣಿಗನ ಪಾತ್ರ ಎಲ್ಲರ ಗಮನ ಸೆಳೆದಿದೆ.

ಹಾಗೆ ನೋಡಿದರೆ, ಈ ಚಿತ್ರದಲ್ಲಿ ಉಪ್ಪಿ ಭರತನಾಟ್ಯ ಮಾಡಲಿದ್ದಾರೆ ಎಂದು ಶೂಟಿಂಗ್ ಸಂದರ್ಭದಲ್ಲೇ ಸುದ್ದಿಯಾಗಿತ್ತು. ಆಗ ಅದನ್ನು ಅಪಹಾಸ್ಯ ಮಾಡಿದವರೇ ಹೆಚ್ಚು. ಮಾಮೂಲಿ ಹಾಡಿಗೆ ಕುಣಿಯಲು ತಿಣುಕಾಡುವ ಉಪ್ಪಿ ಭರತನಾಟ್ಯಕ್ಕೆ ಹೆಜ್ಜೆ ಹಾಕುವರೇ ಎಂದು ಸಾಕಷ್ಟು ಮಂದಿ ಮೂದಲಿಸಿದ್ದರು.

ಬಹುಶಃ ಇದನ್ನು ಉಪ್ಪಿಯೂ ಊಹಿಸಿದ್ದರು. ಮೊದಲೇ ಅವರು ಡ್ಯಾನ್ಸ್ ಎಂದರೆ ಮಾರು ದೂರ ಹಾರುತ್ತಿದ್ದವರು. ಹಾಗಾಗಿ ಸವಾಲಾಗಿ ಪರಿಗಣಿಸಿಯೇ ತರಬೇತಿ ಪಡೆದುಕೊಂಡಿದ್ದಾರೆ. ಈಗ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಡೀ ಚಿತ್ರದಲ್ಲಿ ಪ್ರೇಕ್ಷಕರು ಅತಿಯಾಗಿ ಮೆಚ್ಚಿರುವ ಭಾಗ, ಉಪ್ಪಿಯ ಭರತನಾಟ್ಯ ಎಂಬ ಮೆಚ್ಚುಗೆ ಹರಿದು ಬರುತ್ತಿದೆ.

ಇದಕ್ಕಾಗಿ ಉಪ್ಪಿ, ಮೂಲ ಚಿತ್ರ 'ವರಲಾರು'ವಿನಲ್ಲಿ ಅಜಿತ್‌ಗೆ ಭರತನಾಟ್ಯ ತರಬೇತಿ ಕೊಟ್ಟಿದ್ದ ಗುರುಗಳನ್ನೇ ಕರೆಸಿಕೊಂಡಿದ್ದರಂತೆ. ಅವರಿಂದಲೇ ಒಂದು ತಿಂಗಳ ಕಾಲ ಭರತನಾಟ್ಯ ಕಲಿತಿದ್ದಾರೆ. ಹಾಗೆಂದು ಪೂರ್ತಿ ಭರತನಾಟ್ಯವನ್ನೇನೂ ಕಲಿತಿಲ್ಲ, ಸಿನಿಮಾದಲ್ಲಿನ ಹಾಡಿಗೆ ಬೇಕಾಗುವಷ್ಟು ಹಾವಭಾವಗಳನ್ನು ಮೈಗೂಡಿಸಿಕೊಳ್ಳಲು ಮಾತ್ರ ಯತ್ನಿಸಿದ್ದಾರೆ.

ಈಗ ಅದೇ ಪಾತ್ರವನ್ನು ಸೌಂದರ್ಯಾರ 'ಆಪ್ತಮಿತ್ರ'ಕ್ಕೆ ಹೋಲಿಸಲಾಗುತ್ತಿದೆ ಎಂದರೆ ಉಪ್ಪಿಗೆ ಖುಷಿಯಾಗದೇ ಇರುತ್ತದೆಯೇ? ಇದೇ ನನಗೆ ಸಂದ ಗೌರವ ಎಂದಿದ್ದಾರೆ ಉಪ್ಪಿ.

ಇನ್ನು ಹೆಣ್ಣಿನಂತೆ ಹಾವಭಾವಗಳನ್ನು ಪ್ರದರ್ಶಿಸುವುದೆಂದರೆ ಸುಲಭದ ಮಾತಲ್ಲ. ಹಾಗೆ ಮಾಡಿದರೆ ಅದು ಅಪಹಾಸ್ಯಕ್ಕಷ್ಟೇ ಸೀಮಿತಗೊಳ್ಳಬಹುದು. ಹಾಗಾಗದಂತೆ ಎಚ್ಚರಿಕೆ ವಹಿಸಿರುವ ಉಪ್ಪಿ, ತುಂಬಾ ಕಷ್ಟಪಟ್ಟಿದ್ದಾರಂತೆ. ಅದರ ಪ್ರತಿಫಲ ಸಿಕ್ಕಿದೆ, ಹೆಚ್ಚಿನ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ರಿಯಲ್ ಸ್ಟಾರ್ ಹೇಳಿಕೊಂಡಿದ್ದಾರೆ.

No comments:

Post a Comment