Monday, 19 March 2012

ನಾನು ಕಠಾರಿವೀರ; ರಮ್ಯಾ ಸುರ ಸುಂದರಾಂಗಿ


`ನಾನು ಕಠಾರಿವೀರ; ರಮ್ಯಾ ಸುರ ಸುಂದರಾಂಗಿ` ಎಂದು ಕಣ್ಣಗಳನ್ನು ಸರಸರನೆ ಅತ್ತಿಂದಿತ್ತ ತಿರುಗಿಸುತ್ತಾ ಒಮ್ಮೆ ನಕ್ಕರು ಉಪ್ಪಿ. ಕಠಾರಿ ವೀರ ಸ್ವಮೇಕ್ ಚಿತ್ರ. ಇದೊಂದು ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ. ಚಿತ್ರಕಥೆ ಲವಲವಿಕೆಯಿಂದ ಕೂಡಿದೆ. ಲಕ್ಕಿ ಸ್ಟಾರ್ ರಮ್ಯಾ ಜತೆ ಈ ಹಿಂದೆ ಕೂಡ ನಟಿಸಿದ್ದೆ. ರಮ್ಯಾ ಅದ್ಭುತ ನಟಿ... ಹೀಗೆ ತಮ್ಮ ಹೊಸ ಸಿನಿಮಾ `ಕಠಾರಿ ವೀರ`ನ ಬಗ್ಗೆ ಹೇಳುತ್ತಾ ಹೋದರು ಉಪ್ಪಿ.

ರಮ್ಯಾ ಚಿತ್ರದ ನಾಯಕಿ. ಅಪ್ಸರೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಈಕೆ ಸುರಸುಂದರಾಂಗಿಯಂತೆ. ಈ ಚಿತ್ರದಲ್ಲಿ ಉಪ್ಪಿ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನರಕ, ಸ್ವರ್ಗ ಹಾಗೂ ಭೂಲೋಕದಲ್ಲಿ ಒಂದೊಂದು ಬಗೆಯ ಪಾತ್ರ ನಿಭಾಯಿಸಲಿದ್ದಾರಂತೆ. ಚಿತ್ರಕ್ಕೆ ಉಪೇಂದ್ರ ಹಾಗೂ ಜನಾರ್ಧನ ಮಹರ್ಷಿ ಅವರು ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಮುತ್ತಪ್ಪ ರೈ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಉಪ್ಪಿ ಅಭಿನಯದ ಬಹುತೇಕ ಚಿತ್ರಗಳಿಗೆಲ್ಲಾ ಸಿಂಬಲ್‌ಗಳೇ (ಶ್!, ಓಂ, ಎ, ಸೂಪರ್) ಹೆಸರಾಗುತ್ತಿದ್ದವು. ಆದರೆ ಉಪ್ಪಿ ಈ ಬಾರಿ ಇಷ್ಟುದ್ದ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಠಾರಿ ವೀರನಾಗಿ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ. ಅಂದ ಹಾಗೆ `ಕಠಾರಿ ವೀರ` ಕನ್ನಡದ ಪ್ರಪ್ರಥಮ 3ಡಿ ಸಿನಿಮಾ ಕೂಡ ಆಗಲಿದೆ. ಚಿತ್ರದಲ್ಲಿ ಒಂದು ಐಟಂ ನಂಬರ್ ಕೂಡ ಇದೆ. ಅದರಲ್ಲಿ ಎವರ್‌ಗ್ರೀನ್ ಬ್ಯೂಟಿ ಸುಮನ್ ರಂಗನಾಥ್, ರಮಣೀತೊ ಚೌಧರಿ ಹಾಗೂ ರಿಷಿಕಾ ಅವರು ರಂಭಾ, ಊರ್ವಶಿ, ಮೇನಕೆ ಪಾತ್ರದಲ್ಲಿ ಮೈ ಕುಣಿಸಲಿದ್ದಾರೆ.


`ಕಠಾರಿ ವೀರ ಸುರಸುಂದರಾಂಗಿ` ಫ್ಯಾಂಟಸಿ ಸಿನಿಮಾ. ರೆಬೆಲ್ ಸ್ಟಾರ್ ಅಂಬರೀಷ್ ಅವರು ಯಮನ ಪಾತ್ರದಲ್ಲಿ ಹಾಗೂ ದೊಡ್ಡಣ್ಣ ಚಿತ್ರಗುಪ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುನಿರತ್ನ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಮೊದಲು ಯಮೇಂದ್ರ ಉಪೇಂದ್ರ ಎನ್ನುವ ಹೆಸರಿಡಬೇಕು ಹಾಗೂ ಸಾಧು ಕೋಕಿಲ ಚಿತ್ರವನ್ನು ನಿರ್ದೇಶಿಸಬೇಕು ಅಂದುಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅವೆರಡು ಬದಲಾದವು. ಚಿತ್ರವನ್ನು ಸುರೇಶ್ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಈಗ ನಾನು ಕಠಾರಿ ವೀರ, ರಮ್ಯಾ ಸುರಸುಂದರಾಂಗಿ ಎಂದು ಮತ್ತೊಮ್ಮೆ ನಕ್ಕರು ಉಪೇಂದ್ರ.

`ರಾಜ್‌ಕುಮಾರ್ ಅವರು ನಟಿಸಿದ್ದ ಕಠಾರಿವೀರ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ರಿಮೇಕ್ ಕೂಡ ಅಲ್ಲ. ಇದೊಂದು ಸಂಪೂರ್ಣ ಹೊಸತನವುಳ್ಳ ಚಿತ್ರ. ಸ್ವಮೇಕ್ ಚಿತ್ರ. ಶೂಟಿಂಗ್ ನಡೆಯುತ್ತಿದೆ. ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದ್ದು ಸ್ವಿಡ್ಜರ್ಲೆಂಡ್‌ನಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಲಾಗುವುದು.

ಸಿಂಬಲ್‌ಗಳನ್ನು ಚಿತ್ರದ ಹೆಸರಾಗಿ ಇಡುವುದು ಉಪೇಂದ್ರ ಅವರ ಸ್ಟೈಲ್; ನನ್ನದು ಸಂಪೂರ್ಣ ಬೇರೆ ಅಭಿರುಚಿ. ಹಾಗಾಗಿ ನಾನು ಈ ಚಿತ್ರಕ್ಕೆ ಕಠಾರಿ ವೀರ ಸುರಸುಂದರಾಂಗಿ ಎಂದು ಹೆಸರಿಟ್ಟಿದ್ದೇನೆ` ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

No comments:

Post a Comment