Thursday, 2 August 2012

ಸುದೀಪ್ ವಿಲನ್ ಆದ್ರೂ, ಉಪೇಂದ್ರ ಇನ್ನು ಆಗಲ್ವಂತೆ!


ರಿಯಲ್ ಸ್ಟಾರ್ ಉಪೇಂದ್ರ ನಾಲ್ಕು ವರ್ಷಗಳ ಹಿಂದೆ ತಮಿಳು ಸಿನಿಮಾವೊಂದರಲ್ಲಿ ವಿಲನ್ ಆಗಿದ್ರು. ಕಿಚ್ಚ ಸುದೀಪ್ ಮೊನ್ನೆ ಮೊನ್ನೆಯಷ್ಟೇ ತೆಲುಗಿನಲ್ಲಿ ವಿಲನ್ ಆಗಿ ಸಿಕ್ಕಾಪಟ್ಟೆ ಹೆಸರು ಮಾಡಿದಾಗ, ಮತ್ತೆ ಹುಟ್ಟಿಕೊಂಡ ಪ್ರಶ್ನೆ - ಉಪ್ಪಿ ಮತ್ತೆ ಪರಭಾಷೆಗಳಲ್ಲಿ ವಿಲನ್ ಪಾತ್ರ ಮಾಡ್ತಾರಾ? 

ಹೀಗಂತ ಹಲವರು ಮಾತನಾಡಿಕೊಂಡಿದ್ದರು. ಕಿಚ್ಚ ಸುದೀಪ್ 'ಈಗ'ದಿಂದಾಗಿ ದಕ್ಷಿಣ ಭಾರತದಲ್ಲೇ ದೊಡ್ಡ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಈಗವರು ಕನ್ನಡದಲ್ಲಷ್ಟೇ ಬೇಡಿಕೆಯ ನಟನಲ್ಲ, ಬಹುಭಾಷೆಯ ಸೂಪರ್ ಸ್ಟಾರ್. ಅದೇ ಹಾದಿಯಲ್ಲಿ ಉಪ್ಪಿ ಮತ್ತೊಮ್ಮೆ ಹೆಜ್ಜೆ ಹಾಕುವ ಮನಸ್ಸು ಮಾಡುತ್ತಾರಾ? ಈ ಬಗ್ಗೆ ಉಪ್ಪಿ ಏನು ಹೇಳುತ್ತಾರೆ? ಕುತೂಹಲಕ್ಕೀಗ ಸ್ವತಃ ಅವರೇ ಉತ್ತರಿಸಿದ್ದಾರೆ.

"ವಿಶಾಲ್, ನಯನತಾರಾ ಪ್ರಮುಖ ಪಾತ್ರಗಳಲ್ಲಿದ್ದ 'ಸತ್ಯಂ' ಚಿತ್ರದಲ್ಲಿ ನಾನು ಖಳನಟನಾಗಿದ್ದೆ. ಚಿತ್ರದಲ್ಲಿ ನಾನು ಕೊಲೆಗಾರನಾಗಿ ಕಾಣಿಸಿಕೊಂಡಿದ್ದೆ. ಪಾತ್ರವೂ ಚೆನ್ನಾಗಿತ್ತು" ಎಂದು 2008ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರದ ಪಾತ್ರವನ್ನು ಉಪ್ಪಿ ನೆನಪು ಮಾಡಿಕೊಂಡಿದ್ದಾರೆ.

ಆದರೆ, ಈ ಹಿಂದೆ ಒಂದು ಸಿನಿಮಾದಲ್ಲಿ ವಿಲನ್ ಆಗಿದ್ದ ಮಾತ್ರಕ್ಕೆ ಮತ್ತೆ ಅಂತಹುದೇ ಪಾತ್ರ ಮಾಡುತ್ತೇನೆ ಎಂದರ್ಥವಲ್ಲ. ಅಂತಹ ಪಾತ್ರವನ್ನು ನಾನು ಮತ್ತೆ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಆ ಪಾತ್ರ ಚೆನ್ನಾಗಿತ್ತು, ಹಾಗಾಗಿ ನಟಿಸಿದ್ದೆ ಎಂದು ಮತ್ತೆ ಬೇರೆ ಭಾಷೆಗಳಲ್ಲಿ ವಿಲನ್ ಪಾತ್ರ ಮಾಡುವುದಿಲ್ಲ ಎಂದು ಉಪ್ಪಿ ಸ್ಪಷ್ಟಪಡಿಸಿದ್ದಾರೆ.

'ಸತ್ಯಂ'ನಲ್ಲಿ ಉಪ್ಪಿ ಪಾತ್ರ ಚೆನ್ನಾಗಿದ್ದರೂ, ದುರ್ಬಲ ಕಥೆಯಿಂದಾಗಿ ಚಿತ್ರ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿತ್ತು. 

ಆದರೆ ಈಗ ಹಾಗಿಲ್ಲ. ಉಪೇಂದ್ರ ಕನ್ನಡದ ಸ್ಟಾರ್ ನಟರಲ್ಲಿ ಮುಂಚೂಣಿಯಲ್ಲಿರುವವರು. ಸದ್ಯ ಅವರ 'ಗಾಡ್‌ಫಾದರ್' ತೆರೆಗೆ ಬಂದಿದ್ದು, ಹಿಟ್ ಹಾದಿಯಲ್ಲಿದೆ. ಅವರ ತ್ರಿಪಾತ್ರಗಳು ಗಮನ ಸೆಳೆದಿವೆ.

ಇದರ ಬೆನ್ನಿಗೆ ಕಲ್ಪನಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಂತರದ ಸರದಿ 'ಟೋಪಿವಾಲಾ'. ಓಂ ಪ್ರಕಾಶ್ ರಾವ್ ನಿರ್ದೇಶನದ 30ನೇ ಚಿತ್ರ 'ತ್ರಿವಿಕ್ರಮ'ದ ಪೂರ್ವ ಸಿದ್ಧತೆಯೂ ನಡೆಯುತ್ತಿದೆ. ಇವಿಷ್ಟು ಮುಗಿದ ನಂತರ ಸ್ವತಃ ಉಪೇಂದ್ರ ನಿರ್ದೇಶನದ ಹೋಮ್ ಪ್ರೊಡಕ್ಷನ್ ಚಿತ್ರ. ಹಾಗಂತ ಉಪ್ಪಿ ಹೇಳಿಕೊಂಡಿದ್ದಾರೆ.

No comments:

Post a Comment