Tuesday, 31 July 2012

ಉಪ್ಪಿ 'ಗಾಡ್‌ಫಾದರ್'ಗೆ ಅಭಿಮಾನಿಗಳ ನಮೋ ನಮೋ


ತುಂಬಾ ಸಿಂಪಲ್ಲಾಗಿ ಹೇಳಬೇಕೆಂದರೆ, ಇತ್ತೀಚೆಗಷ್ಟೇ 3ಡಿ ಹೆಗ್ಗಳಿಕೆಯೊಂದಿಗೆ ಬಿಡುಗಡೆಯಾದ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರಕ್ಕಿಂತಲೂ 'ಗಾಡ್‌ಫಾದರ್'ಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದರಲ್ಲೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಹಬ್ಬವೋ ಹಬ್ಬ!

ರಿಮೇಕ್ ಚಿತ್ರವೊಂದಕ್ಕೆ ಈ ಪರಿಯಲ್ಲಿ ಅಭಿಮಾನಿಗಳು ಸ್ಪಂದಿಸುತ್ತಾರೆ ಎಂಬ ಭರವಸೆ ಸ್ವತಃ ಉಪ್ಪಿಗೇ ಇದ್ದಿಲ್ಲವೇನೋ? ಎಷ್ಟಾದರೂ, ಅಜಿತ್ ತಮಿಳಿನಲ್ಲಿ ಮಾಡಿದ್ದ ಪಾತ್ರವನ್ನು ಅಳುಕಿನಿಂದಲೇ ಒಪ್ಪಿಕೊಂಡವರಲ್ಲವೇ? ಹಾಗಿದ್ದರೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಜಿತ್‌ಗಿಂತಲೂ ಚೆನ್ನಾಗಿ ಉಪ್ಪಿಯೇ ನಟಿಸಿದ್ದಾರೆ ಎಂಬಷ್ಟರ ಮಟ್ಟಿಗಿನ ಪ್ರಶಂಸೆ ದಕ್ಕಿದೆ.

ಬಹುತೇಕ ವಿಮರ್ಶಕರು, ರಿಮೇಕ್ ಅನ್ನೋದನ್ನು ಲಘುವಾಗಿ ಟೀಕಿಸುತ್ತಲೇ, 'ಗಾಡ್‌ಫಾದರ್' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭರತನಾಟ್ಯ ಪಟುವಾಗಿ, ಹೆಣ್ಣಿಗನಾಗಿ ಉಪ್ಪಿಯ ಅವತಾರವನ್ನು ಹಾಡಿ ಹೊಗಳಿದ್ದಾರೆ. ವಿಮರ್ಶಕರೇ ಹೀಗೆ ಅಟ್ಟಕ್ಕೇರಿಸಿದಾಗ, ಪ್ರೇಕ್ಷಕರ ಕಥೆಯೇನು? ಚಿತ್ರಮಂದಿರದಿಂದ ಹೊರ ಬಂದ ಮೇಲೆ ಪ್ರತಿಯೊಬ್ಬರ ಬಾಯಿಯಿಂದಲೂ ಹೊರ ಬರುವ ಮೊದಲ ಮಾತು, 'ಉಪ್ಪಿ ಸೂಪರ್ ಸಾರ್'!

ಪ್ರೇಕ್ಷಕರಿಂದ ಆರಂಭಿಕ ಪ್ರತಿಕ್ರಿಯೆಯೇನೋ ಚೆನ್ನಾಗಿಯೇ ಸಿಕ್ಕಿದೆ. ಹಾಗೆಂದು ಇಷ್ಟರಿಂದಲೇ ಚಿತ್ರ ಗೆದ್ದಿದೆ ಎಂದು ಹೇಳುವುದು ಸಾಧ್ಯವಿಲ್ಲ. ಓಪನಿಂಗ್ ಚೆನ್ನಾಗಿದೆ, ಹಾಗಾಗಿ ಗೆಲುವಿನ ಹಾದಿಯತ್ತ ಹೊರಳಬಹುದು ಎಂದಷ್ಟೇ ವ್ಯಾಖ್ಯಾನಿಸಬಹುದು.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಮೊನ್ನೆ ಶುಕ್ರವಾರ (ಜುಲೈ 27) ಬಿಡುಗಡೆಯಾದ ಈ ಚಿತ್ರ ವಾರಾಂತ್ಯದಲ್ಲಿ ಮೂರು ಕೋಟಿ ರೂಪಾಯಿಗಳ ವ್ಯವಹಾರ ಮಾಡಿದೆ. ಅಂಕಿ-ಅಂಶಗಳ ಪ್ರಕಾರ, ಇದು ಕಠಾರಿ ವೀರ ಸುರಸುಂದರಾಂಗಿಯ ಗಳಿಕೆಗಿಂತ ಜಾಸ್ತಿ.

ಬಿಡುಗಡೆಯಾದ ದಿನವೇ, ಬಾಕ್ಸಾಫೀಸಿನಲ್ಲಿ ಒಂದು ಕೋಟಿ ಬಾಚಿಕೊಂಡಿತ್ತು. ಆ ದಿನ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿದ್ದವು. ಆದರೆ ಶನಿವಾರವೂ ಅದೇ ಬಿರುಸು ಕಂಡು ಬಂದಿಲ್ಲ. ಕೋಟಿಯಲ್ಲಿದ್ದ ಕಲೆಕ್ಷನ್ನು 85 ಲಕ್ಷ ರೂಪಾಯಿಗಳಿಗೆ ಕುಸಿದಿದೆ. ಆದರೆ ಭಾನುವಾರ ಅದು ಕೋಟಿ ದಾಟಿದೆ.

ಮೂಲಗಳ ಪ್ರಕಾರ, ಮಲ್ಟಿಪ್ಲೆಕ್ಸುಗಳಿಗಿಂತಲೂ ಸಿಂಗಲ್ ಸ್ಕ್ರೀನ್‌ಗಳನ್ನು ಹೊಂದಿರುವ ಚಿತ್ರಮಂದಿರಗಳಲ್ಲಿ 'ಗಾಡ್‌ಫಾದರ್' ಮಿಂಚುತ್ತಿದೆ. 

ಇದೇ ವೇಳೆ, ಚಿತ್ರದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿತರಕ ಪ್ರಸಾದ್ ಆರೋಪಿಸಿದ್ದಾರೆ.

ಬಿಡುಗಡೆಯಾದ ಮೂರು ದಿನದಲ್ಲಿ ಮೂರು ಕೋಟಿ ಗಳಿಕೆಯಾಗಿದೆ. ನನ್ನ ಲೆಕ್ಕಾಚಾರದ ಪ್ರಕಾರ, ಒಟ್ಟು ಮೂರು ವಾರಗಳಲ್ಲಿ ನಮ್ಮ ಹಣ ವಾಪಸ್ಸು ಬರುತ್ತದೆ. ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಉದ್ದೇಶ ಏನು ಎಂಬುದು ಗೊತ್ತಾಗುತ್ತಿಲ್ಲ ಎಂದು ಮಂಜು ಅವರಿಂದ ಚಿತ್ರವನ್ನು ಖರೀದಿಸಿರುವ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

No comments:

Post a Comment