ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಗಾಡ್ ಫಾದರ್' ಚಿತ್ರ ಬಾಕ್ಸಾಫೀಸಲ್ಲಿ ಕಂಡಾಪಟ್ಟೆ ಕಲೆಕ್ಷನ್ ಮಾಡುತ್ತಿದೆ ಎಂಬ ಸುದ್ದಿ ಇದೆ. ಚಿತ್ರ ನೋಡಿರುವ ಉಪ್ಪಿ ಅಭಿಮಾನಿಗಳ ಬಾಯಿಂದ ಸೂಪರ್ ಎಂಬ ಮಾತುಗಳು ಎಲ್ಲೆಡೆಯಿಂದ ಹರಿದುಬರುತ್ತಿವೆ. ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಂಡ 'ಗಾಡ್ ಫಾದರ್' ಚಿತ್ರವನ್ನು ಆ ತಾಯಿ ಅಂಬುಜಾಕ್ಷಿ ಕೈಹಿಡಿದಿದ್ದಾರಾ?
'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಕಲೆಕ್ಷನ್ ಗೆ ಹೋಲಿಸಿದರೆ 'ಗಾಡ್ ಫಾದರ್' ಓಪನಿಂಗ್ ಬೊಂಬಾಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೆಸರು ಹೇಳಲು ಇಚ್ಛಿಸದ ಗಾಂಧಿನಗರದ ಸಿನಿಮಾ ವ್ಯಾಪಾರಿಯೊಬ್ಬರು ಕಿವಿಯಲ್ಲಿ ಉಸಿರಿದ್ದೇನೆಂದರೆ, ಇದುವರೆಗಿನ 'ಗಾಡ್ ಫಾದರ್' ಕಲೆಕ್ಷನ್ ಹತ್ತಿರಹತ್ತಿರ 3 ಕೋಟಿ ರುಪಾಯಿ ಆಗಿದೆಯಂತೆ.
'ಗಾಡ್ ಫಾದರ್' ಮೊದಲ ದಿನದ ಗಳಿಕೆ ರು.1 ಕೋಟಿ ಇದ್ದದ್ದು ಎರಡನೇ ದಿನ ಕೇವಲ ರು.85 ಲಕ್ಷಕ್ಕೆ ತೃಪ್ತಿಪಡಬೇಕಾಯಿತು. ಭಾನುವಾರ (ಜು.29) ರಜೆದಿನವಾದ ಕಾರಣ ರು.1.05 ಕೋಟಿ ಕಲೆಕ್ಷನ್ ಆಗಿದೆ. ಮಲ್ಟಿಫೆಕ್ಸ್ ಚಿತ್ರಮಂದಿರಗಳಿಗೆ ಹೋಲಿಸಿದರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿಂದಲೇ ಹೆಚ್ಚು ಹೆಚ್ಚು ಝಣ ಝಣ ಕಾಂಚಾಣ ಸದ್ದು ಮಾಡಿದೆಯಂತೆ.
ಒಟ್ಟಿನಲ್ಲಿ ರಾಜ್ಯದಾದ್ಯಂತ 130 ಚಿತ್ರಮಂದಿರಗಳಲ್ಲಿ ತೆರೆಕಂಡಿರುವ 'ಗಾಡ್ ಫಾದರ್' ಉಪ್ಪಿ ತ್ರಿಪಾತ್ರಾಭಿನಯದ ಚಿತ್ರ.
ಸುಮಾರು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಮೂರೇ ದಿನಕ್ಕೆ ಅರ್ಧ ಬಂಡವಾಳ ಬಾಚಿದೆ. ಎರಡನೇ ವಾರದಲ್ಲಿ ಉಳಿದರ್ಧದ ಜೊತೆಗೆ ಲಾಭವೂ ಮಾಡುವ ಎಲ್ಲ ಲಕ್ಷಣಗಳೂ ಇವೆ. ಆ ಬಳಿಕವಷ್ಟೇ ಚಿತ್ರದ ನಿರ್ಮಾಪಕ ಗಂಡುಗಲಿ ಕೆ.ಮಂಜು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ.
ತಮಿಳಿನ ಯಶಸ್ವಿ ಚಿತ್ರ 'ವರಲಾರು' ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸದೆ ಅಲ್ಲಲ್ಲಿ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿತ್ತು. ಜಯಮಾಲಾ ಪುತ್ರಿ ಸೌಂದರ್ಯಾ ಅಭಿನಯದ ಚೊಚ್ಚಲ ಚಿತ್ರವಾದ ಕಾರಣ ಕೊಂಚ ಆಸಕ್ತಿಯೂ ಮೂಡಿಸಿತ್ತು. ಆದರೆ ಚಿತ್ರದಲ್ಲಿ ಸೌಂದರ್ಯಾ ಅಭಿನಯ ನೋಡಿದ ಮೇಲೆ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ.
No comments:
Post a Comment