Monday, 14 May 2012

'ಕಠಾರಿ'ಗೆ ರಿಲೀಫ್; ಹಿಂದೂ ಸಂಘಟನೆಗಳ ವಿರೋಧವಿಲ್ಲ!


'ಕಠಾರಿ ವೀರ ಸುರಸುಂದರಾಂಗಿ' ಪೌರಾಣಿಕ-ಸಾಮಾಜಿಕ 3Dಸಿನಿಮಾಕ್ಕೆ ಇನ್ನೊಂದು ರಿಲೀಫ್ ಸಿಕ್ಕಿದೆ. ದೇವಾನುದೇವತೆಗಳ ಕುರಿತ ಆಕ್ಷೇಪಾರ್ಹ ದೃಶ್ಯಗಳು-ಸಂಭಾಷಣೆಗಳಿಗೆ ಕತ್ತರಿ ಹಾಕಲು ಒಪ್ಪಿರುವ ನಿರ್ಮಾಪಕರ ಮಾತಿನಿಂದಾಗಿ, ಹಿಂದೂ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿವೆ!

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ದೃಶ್ಯಗಳು ಮತ್ತು ಸಂಭಾಷಣೆಗಳು 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಲ್ಲಿರುವುದನ್ನು ಹಲವು ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಗಳ ಮುಖಂಡರು-ಕಾರ್ಯಕರ್ತರು ವಿರೋಧಿಸಿದ್ದರು. ಈ ಸಂಬಂಧ ಈಗ ನಡೆದಿರುವ ಸಂಧಾನ ಯಶಸ್ವಿಯಾಗಿದೆ.


ಉಡುಪಿಯಲ್ಲಿ ನಡೆಯಿತು ಸಂಧಾನ...
ಉಡುಪಿಯ ಶಿರೂರು ಮಠದಲ್ಲಿ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಿತ್ರದ ನಿರ್ಮಾಪಕ ಮುನಿರತ್ನ, ವಿತರಕ ರಾಕ್‌ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಸಂತೋಷ್ ಗುರೂಜಿ ಮುಂತಾದವರು ಭಾಗವಹಿಸಿದ್ದರು.

ಸಭೆಯಲ್ಲಿ ಹಿಂದೂ ಸಂಘಟನೆಗಳು ಮತ್ತು ಇತರರು ವ್ಯಕ್ತಪಡಿಸಿದ ಕಳವಳಗಳನ್ನು ಆಲಿಸಿದ ನಿರ್ಮಾಪಕ ಮುನಿರತ್ನ ಮತ್ತು ಇತರರು, ತಾವು ಹಿಂದೂಗಳ ಧಾರ್ಮಿಕ ಭಾವನೆಗಳ ವಿರೋಧಿಗಳಲ್ಲ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ನೀವು ಸೂಚಿಸಿರುವಂತಹ ಏಳೆಂಟು ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕುತ್ತೇವೆ ಎಂದು ಭರವಸೆ ನೀಡಿದರು.


ವಾರದ ನಂತರ ಫಲಿತಾಂಶ...

ಸಂಧಾನ ಸಭೆಯಲ್ಲಿ ನಿರ್ಧಾರವಾದಂತೆ 'ಕಠಾರಿ ವೀರ'ದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕುವ ಭರವಸೆಯನ್ನು ನಿರ್ಮಾಪಕರು ನೀಡಿದರೂ, ಇದು ಜಾರಿಗೆ ಬರುವುದು ಮುಂದಿನ ಸೋಮವಾರದಿಂದ. ಅಂದರೆ, ಮೇ 21ರಿಂದ.

ಇದೇ ಗುರುವಾರದೊಳಗೆ ಆಕ್ಷೇಪಾರ್ಹ ದೃಶ್ಯಗಳಿಗೆ ನಿರ್ಮಾಪಕರು ಕತ್ತರಿ ಹಾಕಲಿದ್ದಾರೆ. ನಂತರ ಅದೇ ದಿನ ಸಂಜೆ ಆರು ಗಂಟೆಗೆ ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಗಳಿಗೆ ಚಿತ್ರವನ್ನು ತೋರಿಸಲಾಗುತ್ತದೆ. ನಂತರ ಸೆನ್ಸಾರ್ ಬೋರ್ಡ್ ಅನುಮತಿ ಪಡೆಯಲಾಗುತ್ತದೆ. ಬಳಿಕವಷ್ಟೇ ಚಿತ್ರಮಂದಿರಗಳಲ್ಲಿ ಬದಲಾವಣೆ ಮಾಡಲಾಗುತ್ತದೆ.

ಅದುವರೆಗೆ ಅಂದರೆ, ಮೇ 21ರವರೆಗೆ ಪ್ರಸಕ್ತ ಪ್ರದರ್ಶನಗೊಳ್ಳುತ್ತಿರುವ ಆವೃತ್ತಿಯೇ ಮುಂದುವರಿಯಲಿದೆ. ಇದಕ್ಕೆ ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಒಪ್ಪಿದ್ದಾರೆ.


ಇಂದಿನ ಪ್ರತಿಭಟನೆ ರದ್ದು...

ಶುಕ್ರವಾರದಿಂದಲೇ ರಾಜ್ಯದ ಹಲವೆಡೆ 'ಕಠಾರಿ ವೀರ'ನ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳು ಅಡ್ಡಿಯನ್ನುಂಟು ಮಾಡಿದ್ದವು. ಮಂಗಳೂರು, ಉಡುಪಿ, ಚಿತ್ರದುರ್ಗ, ಭದ್ರಾವತಿ ಮುಂತಾದೆಡೆ ಚಿತ್ರಪ್ರದರ್ಶನವನ್ನೂ ಟಾಕೀಸುಗಳು ರದ್ದು ಮಾಡುವ ಅನಿವಾರ್ಯತೆ ಎದುರಾಗಿತ್ತು.

ರಾಜ್ಯದಾದ್ಯಂತ 'ಕಠಾರಿ' ಚಿತ್ರ ಪ್ರದರ್ಶನಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಮೇ 14ರ ಸೋಮವಾರ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಸ್ವತಃ ಶಿರೂರು ಶ್ರೀಗಳು, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದವು. ಈಗ ಆ ಪ್ರತಿಭಟನೆಯನ್ನು ನಿರ್ಮಾಪಕರ ಭರವಸೆ ಮೇರೆಗೆ ಕೈ ಬಿಡಲಾಗಿದೆ. ಸಂಧಾನ ಸಭೆಯ ನಂತರ ಇದನ್ನು ಹಿಂದೂ ಸಂಘಟನೆಗಳ ನಾಯಕರು ಘೋಷಿಸಿದರು.

No comments:

Post a Comment