Wednesday, 25 April 2012

ಅಂಬಿ, ಮುನಿ, ಉಪ್ಪಿ ಗೈರು; ಫಿಲಂ ಚೇಂಬರಿಗೆ ಟೆಕ್ನಿಕಲ್ ಪ್ರಾಬ್ಲಂ


ಅಂತೂ ಇಂತೂ ನಿರ್ಮಾಪಕ ಕೆ.ಮಂಜು ಮತ್ತು ಮುನಿರತ್ನ ಅವರ ಚಿತ್ರಗಳ ಬಿಡುಗಡೆ ಸಂಬಂಧ ಅರ್ಥಹೀನ ವಿವಾದ ಸೃಷ್ಟಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿರುವುದೂ ಅಲ್ಲದೆ ಕೊನೆಗೆ ಅದಕ್ಕೆ ಮತ್ಯಾರನ್ನೋ ತಗಲಾಕಿಕೊಂಡು ವಿವಾದ ಸೃಷ್ಟಿಸಿ ತಮ್ಮ ಸ್ವಾರ್ಥ ಉದ್ದೇಶ ಸಾಧಿಸಲು ನಡೆಸಿರುವ ಒಳ ಷಡ್ಯಂತ್ರದ ವಿರುದ್ದ, ಶಿವಣ್ಣ ಸಾರ್ವಜನಿಕವಾಗಿ ಗುಡುಗಿದ್ದರಿಂದ ವಿಷಯ ಮತ್ಯಾವುದೊ ತಿರುವು ಪಡೆದು ದೊಡ್ಡದಾಗುವ ಬದಲು, ಸುಲಭ ಉಪಾಯದಿಂದ ಅಂತ್ಯ ಕಾಣಲಿ ಎಂಬ ನಿರ್ಧಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ. 

ಮಂಗಳವಾರ ನಾಲ್ಕು ಗಂಟೆಗೆ ಆರಂಭವಾದ ಸಭೆ ಸಂಪೂರ್ಣ ವಿಫಲವಾಗಿರುವ ಕುರಿತು ಅಸಮಾಧಾನಗೊಂಡಿರುವುದನ್ನು ಮುಚ್ಚಿಡಲು, ಮಾಧ್ಯಮದ ಮೇಲೆ ಗೂಬೆ ಕೂರಿಸಿ ತಮ್ಮ ಅಸಹಾಯಕತೆಯನ್ನು ಮುಚ್ಚಿಕೊಳ್ಳುವ ನಾಟಕದೊಂದಿಗೆ ಮಾತು ಆರಂಭಿಸಿದ ನಿರ್ಮಾಪಕ ಕೆ.ವಿ.ಚಂದ್ರಶೇಖರ್, ಸಾರಾ ಗೋವಿಂದು ಅವರು ಹೇಳಿಕೊಟ್ಟ ರೀತಿಯಲ್ಲೇ ಸ್ವಲ್ಪ ಗೊಂದಲದಲ್ಲೇ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿ ಮಾತು ಮುಗಿಸಿದರು.

ಏನೇನೋ ಮಾತಾಡಿ ಮುನಿರತ್ನರಂತೆ ಎಡವಟ್ಟು ಮಾಡಿಕೊಳ್ಳುವುದು ಬೇಡ ಎಂದು ಭಾವಿಸಿದ ಕೆ.ವಿ.ಚಂದ್ರಶೇಖರ್, ಶಿವರಾಜ್ ಕುಮಾರ್ ಹೇಳಿದ್ದೇ ಒಂದು ಮಾಧ್ಯಮಗಳು ಪ್ರಚಾರ ಮಾಡಿದ್ದೇ ಮತ್ತೊಂದು ಎಂದು ಬಕೆಡ್ ಹಿಡಿಯುವಂತಾ ಅಸಹಾಯಕ ಹೇಳಿಕೆ ನೀಡಿ ವಿಷಯವನ್ನು ಮತ್ತೆಲ್ಲಿಗೊ ಕೊಂಡೊಯ್ಯಲು ಯತ್ನಿಸಿದರಾದರೂ ಅದು ಅಸಾಧ್ಯವಾಯಿತು.

ಮಧ್ಯದಲ್ಲಿ ತಲೆಹಾಕಿ ಮಾತನಾಡಿದ ಸಾ.ರಾ.ಗೋವಿಂದು, ಸ್ವಲ್ಪ ಟೆಕ್ನಿಕಲ್ ಪ್ರಾಬ್ಲಂ ಇದೆ ಹಾಗಾಗಿ ಈಗ ಅಂತಿಮ ನಿರ್ಧಾರ ತಿಳಿಸಲಾಗುವುದಿಲ್ಲ ಎಂದು ಹೇಳಿ ಮಾತು ಮುಗಿಸಿದರು. 

ಈ ನಡುವೆ, ತಮ್ಮ ಈ ಸಭೆಯಲ್ಲಿ ಶೇಕಡಾ 90 ರಷ್ಟು ಅಂತಿಮ ನಿರ್ಧಾರವಾಗಿದೆ ಎಂದು ಬೆನ್ನುತಟ್ಟಿಕೊಂಡ ಚಂದ್ರಶೇಖರ್, ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಲು ನಿರಾಕರಿಸಿದ್ದಾರೆ. ಅದೇನಿದ್ದರೂ, ನಾಡಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅಂದ್ರೆ, ಚಿತ್ರ 27ರಂದು ಬಿಡುಗಡೆಯಾಗಬೇಕೆಂದಿದ್ದರೆ, 26ರಂದು ಮಧ್ಯಾಹ್ನ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ. 

No comments:

Post a Comment