Tuesday, 24 April 2012

ಮುನಿ-ಮಂಜು ತಲೆ ಬಾಗಲೇಬೇಕು; ಅಂಬಿ ಡೆಡ್‌ಲೈನ್


ಕೊನೆಗೂ ನಿರ್ಮಾಪಕರಿಬ್ಬರ 'ಕಾಮಿಡಿ ಶೋ' ಅಂತ್ಯಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸಿವೆ. ಅದೂ ಸ್ವತಃ ರೆಬೆಲ್ ಸ್ಟಾರ್ ಅಂಬರೀಷ್ ಕಣಕ್ಕಿಳಿದ ಮೇಲೆ. ಇಂದು ಅಂಬಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಬರೋ ತೀರ್ಮಾನವೇ ಅಂತಿಮವಾಗಿದ್ದು, ಯಾವ ಚಿತ್ರ ಮೊದಲು ಬಿಡುಗಡೆಯಾಗಬೇಕು ಎಂಬ ಮಹತ್ವದ ತೀರ್ಪು ಹೊರ ಬೀಳಲಿದೆ.

ಇದುವರೆಗೆ ನಡೆಸಿದ ಯಾವ ಸಂಧಾನವನ್ನೂ ಮುನಿರತ್ನ ಮತ್ತು ಮಂಜು ಒಪ್ಪಿಕೊಂಡಿಲ್ಲ. ಆದರೆ ಇನ್ನು ಅವರನ್ನು ಹೀಗೆಯೇ ಮುಂದುವರಿಯಲು ನಾವು ಬಿಡೋದಿಲ್ಲ. ನಾಳೆ (ಏಪ್ರಿಲ್ 24) ಅಂಬರೀಷ್ ಮತ್ತು ಉಪೇಂದ್ರ ಸಭೆಗೆ ಬರುತ್ತಾರೆ. ಆ ಸಭೆಗೆ ನಿರ್ಮಾಪಕರೂ ಬರಬೇಕು. ಅಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಹೀಗಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಖಡಾಖಂಡಿತವಾಗಿ ಹೇಳಿದೆ.

ಏಪ್ರಿಲ್ 24ರಂದು ಸಂಜೆ ನಾಲ್ಕು ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (ಕೆಎಫ್‌ಸಿಸಿ) ಈ ಸಭೆ ನಡೆಯಲಿದೆ. ಸಭೆಗೆ ಅಂಬರೀಷ್ ಮತ್ತು ಉಪೇಂದ್ರರನ್ನು ಆಹ್ವಾನಿಸಲಾಗಿದೆ. ಕೆಎಫ್‌ಸಿಸಿಯ ಸದಸ್ಯರು ಕೂಡ ಸಭೆಯಲ್ಲಿರುತ್ತಾರೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ಸರ್ವಸಮ್ಮತ ತೀರ್ಮಾನಕ್ಕೆ ಮುನಿರತ್ನ ಮತ್ತು ಮಂಜು ಬದ್ಧರಾಗಿರಬೇಕು. ಹೀಗಂತ ಕೆಎಫ್‌ಸಿಸಿ ಅಧ್ಯಕ್ಷ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.


ಎರಡೂ ಚಿತ್ರ ಒಟ್ಟಿಗೆ ಬಿಡುಗಡೆ? 

ತನ್ನದೇ ಚಿತ್ರ ಮೊದಲು ಬಿಡುಗಡೆ ಮಾಡಬೇಕು ಎಂದು ಇಬ್ಬರೂ ನಿರ್ಮಾಪಕರು ಪಟ್ಟು ಹಿಡಿದಿರುವುದರಿಂದ, ಇಂದು ಅಂಬಿ ನೇತೃತ್ವದಲ್ಲಿ ಹೊರ ಬರುವ ತೀರ್ಪನ್ನು ನಿರ್ಮಾಪಕರು ಒಪ್ಪಿಕೊಳ್ಳುವರೇ? ಇದು ಪ್ರಶ್ನೆ. ಮುನಿರತ್ನರ 'ಕಠಾರಿ ವೀರ ಸುರಸುಂದರಾಂಗಿ' ಈ ವಾರ ಬಿಡುಗಡೆಯಾಗಲಿ ಎಂದರೆ, 'ಗಾಡ್‌ಫಾದರ್' ನಿರ್ಮಾಪಕ ಮಂಜು ತನಗೆ ಅನ್ಯಾಯವಾಯ್ತು ಎಂದು ತಕರಾರು ತೆಗೆಯಬಹುದು. ಮಂಜುವಿಗೆ ಗೆಲುವಾದರೆ ಮುನಿರತ್ನ ತಕರಾರು ಎತ್ತಬಹುದು.

ಹಾಗಾಗಿ ಈ ಸಮಸ್ಯೆ ಅಂಬಿ ನೇತೃತ್ವದಲ್ಲೂ ಸುಲಭವಾಗಿ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಯಾವುದಾದರೂ ಒಂದು ಚಿತ್ರವನ್ನು ಬಿಡುಗಡೆ ಮಾಡುವ ತೀರ್ಪನ್ನು ಇಬ್ಬರಲ್ಲೊಬ್ಬರು ನಿರ್ಮಾಪಕರು ವಿರೋಧಿಸಿದರೆ, ಎರಡೂ ಚಿತ್ರಗಳು ಒಟ್ಟಿಗೇ ಬಿಡುಗಡೆಯಾಗಲಿ ಎಂಬ ತೀರ್ಪೇ ಹೊರ ಬೀಳುವ ಸಾಧ್ಯತೆ ಹೆಚ್ಚು.


ನನಗೆ ಇಬ್ಬರೂ ಬೇಕು: ಉಪೇಂದ್ರ 

ಕಠಾರಿ ವೀರ ಸುರಸುಂದರಾಂಗಿ ಮತ್ತು ಗಾಡ್‌ಫಾದರ್ - ಎರಡು ಚಿತ್ರಗಳಲ್ಲಿ ಯಾವುದು ಮೊದಲು ಬಿಡುಗಡೆಯಾಗಬೇಕು ಎಂಬ ವಿವಾದದಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಿಲ್ಲ ಎಂಬ ಟೀಕೆಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ. ಎರಡರಲ್ಲೂ ನಾನೇ ನಾಯಕ, ಹಾಗಾಗಿ ಎರಡೂ ಚಿತ್ರಗಳು ನನಗೆ ಮುಖ್ಯ. ನನಗೆ ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ ಎಂದಿದ್ದಾರೆ.

ನನ್ನ ಪೂರ್ತಿ ಶ್ರಮವನ್ನು ಈ ಎರಡೂ ಚಿತ್ರಗಳಿಗೆ ಹಾಕಿದ್ದೇನೆ. ಎರಡೂ ಚಿತ್ರಗಳ ಯಶಸ್ಸು ನನಗೆ ಮುಖ್ಯ. ಬಿಡುಗಡೆಯ ನಂತರ ಮುನಿರತ್ನ ಮತ್ತು ಮಂಜು ಇಬ್ಬರ ಮುಖದಲ್ಲೂ ನಗು ಕಾಣಬೇಕೆಂದು ನಾನು ಬಯಸುತ್ತಿದ್ದೇನೆ. ಇಲ್ಲಿ ಯಾವುದೇ ಹುಳುಕು ಹುಡುಕಬೇಕಾಗಿಲ್ಲ ಎನ್ನುವುದು ಉಪ್ಪಿ ಮಾತು.


'ಚೇಲಾ' ಎಂದ ಮಂಜು, ಸೂರಪ್ಪ ರಾಜೀನಾಮೆ..

ಈ ನಡುವೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸೂರಪ್ಪ ಬಾಬು ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕಾರಣ, 'ಗಾಡ್‌ಫಾದರ್' ನಿರ್ಮಾಪಕ ತನ್ನನ್ನು ಚೇಲಾ ಎಂದು ಅವಹೇಳನ ಮಾಡಿರುವುದು ಎಂದು ಸೂರಪ್ಪ ಬಾಬು ಆರೋಪಿಸಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ನನ್ನನ್ನು ಮಂಜು ಅವರು 'ಚೇಲಾ' ಎಂದು ಕರೆದಿದ್ದಾರೆ. ಆದರೆ ನಾನು ಅಂತಹ ವ್ಯಕ್ತಿ ಅಲ್ಲ. ಯಾರ ಮಾತಿಗೂ ಕುಣಿಯಬೇಕಾದ ಅನಿವಾರ್ಯತೆ ನನಗಿಲ್ಲ. ಮಂಜು ಮಾತು ನನಗೆ ನೋವನ್ನುಂಟು ಮಾಡಿದೆ. ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಂಜು, ನಾನು ಸೂರಪ್ಪ ಬಾಬು ಅವರನ್ನು ಚೇಲಾ ಎಂದು ಕರೆದಿಲ್ಲ ಎಂದಿದ್ದಾರೆ.

No comments:

Post a Comment