Monday, 5 September 2011

"ಆರಕ್ಷಕ" ಚಿತ್ರದಲ್ಲಿ ನಮ್ಮ ಅಧಿಪತಿಯ ಮತ್ತೊಂದು ವಿಶೇಷ ಪಾತ್ರ


ಪಾತ್ರ ಯಾವುದೇ ಇರಲಿ, ಅದಕ್ಕಿರುವ ಪ್ರಾಮುಖ್ಯತೆಯನ್ನು ಅರಿತುಕೊಂಡು ನಟಿಸಲು ಒಪ್ಪುವ ಹೀರೋಗಳ ಸಾಲಿನಲ್ಲಿ ಎದ್ದು ಕಾಣುವ ನಟ ರಿಯಲ್ ಸ್ಟಾರ್ ಉಪೇಂದ್ರ. ಅಂತಹ ಉಪ್ಪಿ ಈಗ ಒಪ್ಪಿಕೊಂಡಿರುವ ಚಿತ್ರ ಭಾರೀ ಕುತೂಹಲ ಹುಟ್ಟಿಸಿದೆ. ಅವರ ಹೊಸ ಅವತಾರ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.

ಆ ಚಿತ್ರವೇ "ಆರಕ್ಷಕ". ಇದನ್ನು ನಿರ್ದೇಶಿಸುತ್ತಿರುವುದು ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ಪಿ. ವಾಸು. ಸದ್ದಿಲ್ಲದೆ ಸೆಟ್ಟೇರಿ ಚಿತ್ರೀಕರಣ ಶುರುವಿಟ್ಟುಕೊಂಡಿರುವ ಸಿನಿಮಾದ ಜಾಹೀರಾತುಗಳು ಇತ್ತೀಚೆಗಷ್ಟೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೊದಲ ನೋಟದಲ್ಲೇ ಇದೊಂದು ವಿಭಿನ್ನ ಚಿತ್ರ ಅನ್ನೋ ಸಂದೇಶವನ್ನು ಛಾಯಾಚಿತ್ರಗಳು ನೀಡಿವೆ.

ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಉಪೇಂದ್ರ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ಅದೇ ಭಾವವನ್ನು ಹುಟ್ಟಿಸುತ್ತಿದೆ. ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು ಹೊಂದಿರೋ ಚಿತ್ರ ಆಪ್ತಮಿತ್ರ ಮತ್ತು ಆಪ್ತರಕ್ಷಕದ ಸಾಲಿನಲ್ಲೇ ಸಾಗಲಿದೆ, ಉಪ್ಪಿಗೆ ಇಲ್ಲಿ ನೆಗೆಟಿವ್ ಶೇಡ್ ಹೊಂದಿರುವ ಸೈಕೋ ಪಾತ್ರ ಎಂದು ಹೇಳಲಾಗುತ್ತಿದೆ.

ಅದು ನಿಜವೇ ಆಗಿದ್ದರೆ ಕನ್ನಡ ಚಿತ್ರಪ್ರೇಮಿಗಳಿಗೆ ಇನ್ನೊಂದು ಖುಷಿಯ ವಿಚಾರ ಬೇರೆ ಬೇಕಾಗಿಲ್ಲ. ಯಾಕೆಂದರೆ ಈ ಹಿಂದೆ ಎ, ಉಪೇಂದ್ರ, ಪ್ರೀತ್ಸೆ, ರಕ್ತಕಣ್ಣೀರು, ಬುದ್ಧಿವಂತ ಮುಂತಾದ ಚಿತ್ರಗಳಲ್ಲಿ ಮಿಂಚಿರುವುದು ನೆಗೆಟಿವ್ ಶೇಡ್ ಪಾತ್ರಗಳಿಂದ ಅನ್ನೋದು. ಅಂತಹ ಪಾತ್ರಗಳಿಗೆ ಜೀವ ತುಂಬುವ ನಟ ಉಪೇಂದ್ರ.

ಅಂದ ಹಾಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸದಾ ಮತ್ತು ಸೀತಾ ಉಪ್ಪಿಯ ಜತೆ ಹೆಜ್ಜೆ ಹಾಕಲಿದ್ದಾರೆ. ಸಂಗೀತ ಗುರುಕಿರಣ್ ಅವರದ್ದು. ನಿರ್ಮಾಣದ ಹೊಣೆ ಕೃಷ್ಣ ಪ್ರಜ್ವಲ್ ಹೊತ್ತಿದ್ದಾರೆ.

ಹಾಗಿದ್ರೆ ಈ ಚಿತ್ರ ರಿಮೇಕ್ ಅಲ್ಲವೇ? ಈ ಪ್ರಶ್ನೆಗೆ ಸದ್ಯಕ್ಕೆ ನೀಡಬಹುದಾದ ಉತ್ತರ ಅಲ್ಲ ಅನ್ನೋದು. ಏನೇ ಆಗಲಿ, 'ಸೂಪರ್'ನಂತಹ ಸೂಪರ್ ಹಿಟ್ ಮತ್ತು ಗುಣಮಟ್ಟದ ಚಿತ್ರ ನೀಡಿ ಗಗನಕ್ಕೇರಿರುವ ಉಪ್ಪಿ, ರಿಮೇಕ್ ಹುಚ್ಚು ಬಿಟ್ಟು ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ತಲುಪಿಸಬೇಕೆನ್ನುವುದು ಚಿತ್ರಪ್ರೇಮಿಗಳ ಅಪೇಕ್ಷೆ.

No comments:

Post a Comment