Sunday, 4 September 2011

ಜೊತೆಜೊತೆಯಲಿ ರಿಯಲ್ ಸ್ಟಾರ್ ಉಪೇಂದ್ರ- ಕಿಚ್ಚ ಸುದೀಪ್


ಇವರಿಬ್ಬರೂ ಕನ್ನಡದ ಮೇರು ನಟರು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್. ಇಬ್ಬರ ಕೆರಿಯರ್ ನಲ್ಲಿ ಸಾಕಷ್ಟು ಭಿನ್ನತೆಗಳಿದ್ದರೂ ಸಾಮ್ಯತೆಗಳು ಸಾಕಷ್ಟಿವೆ. ನಟನೆ, ನಿರ್ದೇಶನ, ಹಾಡು, ಕಥೆ, ಚಿತ್ರಕಥೆ, ಸಂಭಾಷಣೆ, ಹೀಗೆ ಎಲ್ಲ ವಿಭಾಗಗಳಲ್ಲಿ ಈ ಇಬ್ಬರೂ ಕೆಲಸಮಾಡಿ ಯಶಸ್ವಿಯೂ ಆಗಿದ್ದಾರೆ. ಇದೀಗ ಹೊಸ ಸಂತೋಷದ ಸುದ್ದಿಯನ್ನು ಹೊರಹಾಕಿದ್ದಾರೆ...

ಈ ಹೊಸ ವಿಷಯ ಏನಂದ್ರೆ... ಈ ಇಬ್ಬರೂ ಸದ್ಯದಲ್ಲಿಯೇ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಈ ವಿಷಯ ಸ್ವತಃ ಉಪ್ಪಿ ಬಾಯಿಂದಲೇ ಬಂದಿರುವುದರಿಂದ ಸಂದೇಹಕ್ಕೆ ಆಸ್ಪದವೇ ಇಲ್ಲ. ಇಬ್ಬರ ಅಭಿಮಾನಿಗಳಿಗೂ ಈ ಸುದ್ದಿಯಿಂದ ರೋಮಾಂಚನ ಗ್ಯಾರಂಟಿ.

ಸುದೀಪ್ 38ನೇ ಹುಟ್ಟುಹಬ್ಬದ ದಿನ ಈ ವಿಷಯ ದೃಢಪಟ್ಟಿದ್ದು, ಇತ್ತೀಚಿಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದ್ದ ಸುದೀಪ್ ರ 'ಕೆಂಪೇಗೌಡ' ನೋಡಿ ತಾವು ಸಾಕಷ್ಟು ಪ್ರಭಾವಿತರಾಗಿದ್ದಾಗಿ ಉಪೇಂದ್ರ ಹೇಳಿಕೊಂಡರು.

"ಭೇಟಿಯಾದಾಗಲೆಲ್ಲ ಇಬ್ಬರೂ ಒಟ್ಟಿಗೆ ಕೆಲಸಮಾಡುವ ಬಗ್ಗೆ ಮಾತಾಡಿಕೊಳ್ತಾ ಇದ್ವಿ. ಆದರೆ ಕಾಲ ಈಗ ಕೂಡಿ ಬಂದಿದೆ" ಎಂದ ಉಪ್ಪಿ ಮಾತಿಗೆ ದನಿಗೂಡಿಸಿದ ಸುದೀಪ್, ಮೊದಲ ಬಾರಿಗೆ ಉಪ್ಪಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ಎಂದಿದ್ದಾರೆ.

ಸದ್ಯಕ್ಕೆ ಈ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. 'ಆರಕ್ಷಕ' ಶೂಟಿಂಗ ಮುಗಿಸಿ ಇದೀಗ 'ಗಾಡ್ ಫಾದರ್' ನಲ್ಲಿ ಉಪೇಂದ್ರ ತೊಡಗಿಸಿಕೊಂಡಿದ್ದರೆ 'ವಿಷ್ಣುವರ್ಧನ','ಈಗ' ಮತ್ತು 'ವರದನಾಯಕ' ಚಿತ್ರಗಳಲ್ಲಿ ಸುದೀಪ್ ಬ್ಯುಸಿ!

ಹಾಗಾಗಿ ಕೈಯಲ್ಲಿರುವ ಚಿತ್ರಗಳನ್ನು ಮುಗಿಸಿ ನಂತರ ಈ ಇಬ್ಬರೂ ಒಂದಾಗಿ ಕೆಲಸ ಮಾಡಲಿದ್ದಾರೆ. ಬರಲಿರುವ ಆ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು ಟೈಟಲ್ ಇನ್ನೂ ನಿರ್ಧಾರವಾಗಬೇಕಿದೆ. ಸಿನಿಪ್ರಿಯರಿಗೆ ಸದ್ಯದಲ್ಲಿಯೇ ಸಂತಸದ ಸುಗ್ಗಿ...

No comments:

Post a Comment