Friday, 10 February 2012

ಉಪ್ಪಿ ಪತ್ನಿ ಪ್ರಿಯಾಂಕಾ ಆಕ್ಷನ್-ಕಟ್ ಹೇಳ್ತಾರಂತೆ!


ಪ್ರಿಯಾಂಕಾ ಉಪೇಂದ್ರ ಅವರ ಬಹುಕಾಲದ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ. ಹೌದು, ತನ್ನ ಪತಿ ಉಪೇಂದ್ರ ನಿರ್ದೇಶನದ 'ಸೂಪರ್' ಚಿತ್ರದಲ್ಲಿ ಕೈಯಾಡಿಸಿದ್ದ ಪ್ರಿಯಾಂಕಾ ಈಗ ತಾನೇ ಸ್ವತಂತ್ರವಾಗಿ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ.

ಇದುವರೆಗೆ ನಟನೆಯಲ್ಲಷ್ಟೇ ಗುರುತಿಸಿಕೊಂಡಿದ್ದ ಪ್ರಿಯಾಂಕಾ ಆಕ್ಷನ್-ಕಟ್ ಹೇಳಬೇಕೆಂದು ಯೋಚಿಸಿದ್ದು ಈಗೇನಲ್ಲ. ಹಲವು ಸಮಯದಿಂದ ಇದಕ್ಕೆ ತಯಾರಿಯಲ್ಲಿದ್ದರು. ಒಂದಷ್ಟು ಕಥೆಗಳನ್ನು ಕೂಡ ಇದೇ ನಿಟ್ಟಿನಲ್ಲಿ ಬರೆದು ಮುಗಿಸಿದ್ದಾರೆ. ಕೊನೆಯಲ್ಲಿ ಒಂದು ಕಥೆಯನ್ನು ಆರಿಸಿಯೂ ಆಗಿದೆ. ಈಗ ಆ ಕಥೆಗೆ ಅಂತಿಮ ರೂಪ ಕೊಡುತ್ತಿದ್ದಾರೆ ಪ್ರಿಯಾಂಕಾ. ಕನ್ನಡ ಮತ್ತು ಬೆಂಗಾಲಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ.

ಉಪ್ಪಿಯೇ ಹೀರೋ...
ನಿರೀಕ್ಷೆಯಂತೆ ಪ್ರಿಯಾಂಕಾ ಅವರ ಹೊಸ ಚಿತ್ರದಲ್ಲಿ ಪತಿ ಉಪೇಂದ್ರರೇ ನಾಯಕ. ಹಾಗೆಂದು ಕಥೆ ಬರೆಯುವಾಗ ಪ್ರಿಯಾಂಕಾ ಉಪ್ಪಿಯನ್ನೇ ಮುಂದಿಟ್ಟುಕೊಂಡಿಲ್ಲ. ಈ ಕಥೆ ಯಾರಿಗೆ ಬೇಕಾದರೂ ಸೂಟ್ ಆಗಬಹುದು. ಇನ್ನೂ ಉಪ್ಪಿ ಕಥೆ ಕೇಳಿಲ್ಲ. ಅವರು ಕೇಳಿದ ನಂತರವಷ್ಟೇ ಯಾರು ನಾಯಕ ಅನ್ನೋದು ನಿರ್ಧಾರವಾಗಲಿದೆ.

ಉಪ್ಪಿಯೀಗ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಅವುಗಳಿಂದ ಮುಕ್ತರಾದ ನಂತರ ನನ್ನ ಸಿನಿಮಾದ ಬಗ್ಗೆ ಹೇಳುತ್ತೇನೆ. ಒಪ್ಪಿಕೊಂಡರೆ ಅವರೇ ನಾಯಕರಾಗಿರುತ್ತಾರೆ ಎನ್ನುತ್ತಾರೆ ಈ ಬಗ್ಗೆ ಪ್ರಿಯಾಂಕಾ.

ಆರಂಭದಲ್ಲಿ ಪ್ರಿಯಾಂಕಾ ನಿರ್ದೇಶನದತ್ತ ಹೊರಳುವ ನಿರ್ಧಾರವನ್ನು ಉಪ್ಪಿ ಬೆಂಬಲಿಸಿರಲಿಲ್ಲವಂತೆ. ನಟನೆಯಲ್ಲೇ ಮುಂದುವರಿ ಎಂದಷ್ಟೇ ಹೇಳಿದ್ದರು. ಆದರೆ ಪ್ರಿಯಾಂಕಾ ಕೆಲಸವನ್ನು ನೋಡಿ ಮೆಚ್ಚಿ, ಖಂಡಿತಾ ನಿನಗಿದು ಸಾಧ್ಯ ಎಂದು ಹೇಳಿದ್ದರಂತೆ. ಈ ಹಿಂದೆ ಸೂಪರ್ ಚಿತ್ರದಲ್ಲಿ ಕೈಯಾಡಿಸಿರುವ ಅನುಭವ ಇರುವುದರಿಂದ ಕಷ್ಟವಾಗುತ್ತಿಲ್ಲ. ಖಂಡಿತಾ ಭಿನ್ನ ಚಿತ್ರ ಕೊಡುತ್ತೇನೆ. ರೊಮ್ಯಾಂಟಿಕ್ ಸಿನಿಮಾ. ಉಪ್ಪಿಗೆ ಬೇರೆಯದೇ ಆದ ಇಮೇಜ್ ಕೊಡುವ ಭರವಸೆಯಿದೆ ಎನ್ನುತ್ತಾರೆ.

ನಾಯಕಿ ನಾನಲ್ಲ...
ಉಪ್ಪಿ ನಾಯಕನಾಗಿರೋದು ಏನೋ ಸರಿ, ಆದ್ರೆ ನಾಯಕಿ ಯಾರು? ಖಂಡಿತಾ ಪ್ರಿಯಾಂಕಾ ನಾಯಕಿಯಾಗಿರೋದಿಲ್ಲ. ಹೌದು, ಎಚ್2ಒ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿದ್ದ ಪ್ರಿಯಾಂಕಾ ನಂತರ ಜತೆಯಾಗಿ ನಟಿಸಿದ್ದು 'ಶ್ರೀಮತಿ' ಚಿತ್ರದಲ್ಲಿ. ಆದರೆ ಆ ಚಿತ್ರ ಹೇಳ ಹೆಸರಿಲ್ಲದಂತೆ ಥಿಯೇಟರುಗಳಿಂದ ಮಾಯವಾಗಿತ್ತು.

ಅದೇ ಕಾರಣದಿಂದಲೋ ಏನೋ, ಉಪ್ಪಿಗೆ ಈ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿರೋದಿಲ್ಲ. ಬದಲಿಗೆ ಬೇರೆ ಯಾರನ್ನಾದರೂ ಆರಿಸಲಾಗುತ್ತದೆ. ಈ ಕೆಲಸ ಇನ್ನೇನು ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ.

ಕಥೆ, ನಿರ್ದೇಶನದ ಜತೆ ನಿರ್ಮಾಣದ ಹೊಣೆಯನ್ನೂ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಹಂತಗಳಲ್ಲೂ ಉಪ್ಪಿ ಸಾಥ್ ನೀಡುತ್ತಾರಂತೆ. ಇಂಗ್ಲೀಷಿನಲ್ಲಿ ಅವರು ಬರೆಯುವ ಕಥೆಯನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ಕೂಡ ಉಪ್ಪಿಯದ್ದಂತೆ!




No comments:

Post a Comment