Wednesday, 28 September 2011

ವಿಷ್ಣುವರ್ಧನ್ ಮತ್ತು ಉಪೇಂದ್ರಗೆ ಹೋಲಿಕೆಗಳಿವೆಯಂತೆ!


ಸಾಹಸಸಿಂಹ ವಿಷ್ಣುವರ್ಧನ್ ನನ್ನ ಆರಾಧ್ಯ ದೈವ. ಅವರನ್ನು ಪ್ರತಿದಿನ, ಪ್ರತಿಕ್ಷಣ ನೋಡುತ್ತಾ, ಮಾತನಾಡುತ್ತಾ, ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಅಂತಹ ವಿಷ್ಣುವಿನಲ್ಲಿದ್ದ ಗುಣಗಳು ರಿಯಲ್ ಸ್ಟಾರ್ ಉಪೇಂದ್ರ ಅವರಲ್ಲಿ ನನಗೆ ಕಾಣುತ್ತಿವೆ -- ಹೀಗಂತ ಹೇಳಿರೋದು ಜನಪ್ರಿಯ ನಿರ್ದೇಶಕ ಪಿ. ವಾಸು.

ದಕ್ಷಿಣ ಭಾರತದ ಚತುರ್ಭಾಷಾ ನಿರ್ದೇಶಕ ವಾಸು ಅವರು ವಿಷ್ಣುವರ್ಧನ್‌ರನ್ನು ನಿರ್ದೇಶಿಸಿದ ಕೊನೆಯ ಎರಡು ಚಿತ್ರಗಳಾದ ಆಪ್ತಮಿತ್ರ ಮತ್ತು ಆಪ್ತರಕ್ಷಕ ಸೂಪರ್ ಹಿಟ್ ಆಗಿದ್ದವು. ಪ್ರಸಕ್ತ ಅವರು ಉಪ್ಪಿ ನಾಯಕನಾಗಿರುವ ಆರಕ್ಷಕ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಬಗ್ಗೆ ಪತ್ರಕರ್ತರ ಜತೆ ಮಾತಿಗೆ ಕುಳಿತಿದ್ದ ವಾಸು, ತಾನು ಕಂಡ ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದರು.

ವಾಸುವಿಗೆ ವಿಷ್ಣು ದರ್ಶನ..


ನಾನು ಕಣ್ಣು ಮುಚ್ಚಿದಾಗಲೆಲ್ಲ ವಿಷ್ಣು ಬರುತ್ತಾರೆ. ನನಗೆ ಆಶೀರ್ವಾದ ಮಾಡುತ್ತಾರೆ. ನನ್ನ ಜತೆ ಮಾತನಾಡುತ್ತಾರೆ. ಅವರು ಬದುಕಿಲ್ಲ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಅಂತಹ ಶ್ರೇಷ್ಠ ವ್ಯಕ್ತಿ ನಮ್ಮ ನಡುವೆಯೇ ಇದ್ದಾರೆ ಅನ್ನೋದು ವಾಸು ಅನುಭವದ ಮಾತು.

ತಾನು ವಿಷ್ಣುವರ್ಧನ್ ಅವರನ್ನು ಎಷ್ಟೊಂದು ನೆಚ್ಚಿಕೊಂಡಿದ್ದೇನೆ ಎಂಬುದಕ್ಕೆ ವಾಸು ಉದಾಹರಣೆಗಳನ್ನೂ ನೀಡಿದರು. ಅವರ ಚೆನ್ನೈ ಕಚೇರಿಯಲ್ಲಿ ಇರುವುದು ಎರಡೇ ಭಾವಚಿತ್ರಗಳಂತೆ. ಒಂದು ವಾಸು ಗಾಡ್‌ಫಾದರ್ ಶ್ರೀಧರ್ ಅವರದ್ದು. ಇನ್ನೊಂದು ಡಾ. ವಿಷ್ಣುವರ್ಧನ್ ಅವರದ್ದು. ದಶಕಗಳ ಹಿಂದೆ ವಿಷ್ಣು ಜತೆ ಹಲವು ಚಿತ್ರಗಳನ್ನು ಮಾಡಿದ್ದರೂ, ಕೊನೆಯ ಎರಡು ಚಿತ್ರಗಳನ್ನು ಮರೆಯಲಾಗುತ್ತಿಲ್ಲ. ಆ ಚಿತ್ರಗಳ ಮೂಲಕ ಅವರು ವಾಸು ಮೇಲೆ ಅಗಾಧ ಪ್ರಭಾವವನ್ನು ಬೀರಿದ್ದಾರಂತೆ.

ಉಪ್ಪಿಯಲ್ಲಿದೆ ವಿಷ್ಣು ಗುಣ...


ವಾಸು ಪ್ರಕಾರ, ಉಪ್ಪಿಯಲ್ಲಿ ವಿಷ್ಣುವರ್ಧನ್ ಅವರಲ್ಲಿದ್ದ ಕೆಲವು ವಿಶೇಷ ಗುಣಗಳಿವೆ. ಸಾಹಸಸಿಂಹ ತೋರಿಸುತ್ತಿದ್ದ ಕರ್ತವ್ಯದ ಕಡೆಗಿನ ಭಯ, ಅರ್ಪಣಾ ಮನೋಭಾವ, ಪ್ರಾಮಾಣಿಕತೆ, ಶಿಸ್ತು ಮತ್ತು ನಿರ್ಮಾಪಕ ಗೆಲ್ಲಬೇಕೆನ್ನುವ ವಿಶಾಲ ಹೃದಯ ಉಪ್ಪಿಯಲ್ಲೂ ಇದೆಯಂತೆ. ಇದರ ಜತೆ, ಇಬ್ಬರ ಹುಟ್ಟುಹಬ್ಬವೂ ಒಂದೇ ದಿನ (ಸೆಪ್ಟೆಂಬರ್ 18) ಆಗಿರುವುದು ವಾಸು ಅವರನ್ನು ಅಚ್ಚರಿಯಲ್ಲಿ ಕೆಡವಿದೆ.

ಉಪ್ಪಿ ಗ್ರೇಟ್ ಆಕ್ಟರ್....


ಉಪೇಂದ್ರ ಸ್ತುತಿಯನ್ನು ವಾಸು ಇಷ್ಟಕ್ಕೇ ನಿಲ್ಲಿಸಿಲ್ಲ. ಅವರ ಜತೆ ಮಾತನಾಡುವ ಮೊದಲು ಎ, ಉಪೇಂದ್ರ, ರಕ್ತಕಣ್ಣೀರು ಮತ್ತು ಸೂಪರ್ ಚಿತ್ರಗಳನ್ನು ನೋಡಿದ್ದರಂತೆ. ಅದರ ನಂತರವೇ ಉಪೇಂದ್ರ ಅಂದರೆ ಏನು ಅನ್ನೋದು ಸ್ಪಷ್ಟವಾಗಿದ್ದು. ಚಿತ್ರದುದ್ದಕ್ಕೂ ಅದರ ಪ್ರತ್ಯಕ್ಷಾನುಭವ ತನಗಾಗಿದೆ ಎಂದು ವಾಸು ಹೇಳಿಕೊಂಡಿದ್ದಾರೆ.

'ಆರಕ್ಷಕ'ದಲ್ಲಿ ಉಪ್ಪಿ ತನ್ನ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ. ನಾನು ಕಂಡ ಪ್ರಕಾರ, ಆಪ್ತಮಿತ್ರದಲ್ಲಿ ಸೌಂದರ್ಯ ನಟಿಸಿದ ಮಟ್ಟಕ್ಕೆ ಉಪ್ಪಿ ತಲುಪಿದ್ದಾರೆ. ಚಿತ್ರದ ಕೊನೆಯ ಇಪ್ಪತ್ತು ನಿಮಿಷವಂತೂ ಸ್ಮರಣೀಯ. ಸಿನಿಮಾವನ್ನು ಇನ್ನೊಮ್ಮೆ ನೋಡಬೇಕು ಅಂತ ಅನ್ನಿಸುವುದು ಕೂಡ ಇದರಿಂದಲೇ ಅಂತ ಹೇಳುವ ವಾಸು, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿನಿಮಾದಲ್ಲಿದೆ ಎಂದಿದ್ದಾರೆ.

ಇದೊಂದು ವಿಚಿತ್ರ ಕಥೆ...


ವಾಸು ಅಪಾದಮಸ್ತಕ ಹೊಗಳುತ್ತಿದ್ದರೂ, ಅಲ್ಲೇ ಇದ್ದ ಉಪ್ಪಿ ಹೊಗಳಿಕೆಯಿಂದ ಉಬ್ಬದೆ, ನಿರ್ಭಾವುಕರಂತೆ ನಿರ್ಲಿಪ್ತರಾಗಿದ್ದರು. ಆದರೆ ತನ್ನ ಸರದಿ ಬಂದಾಗ, ಹೊಗಳಿಕೆಗಳು ಅವರ ಬಾಯಿಯಿಂದಲೂ ಹೊರ ಬಿದ್ದವು. ಹಾಗೆ ಅವರು ಮೊದಲು ಹೇಳಿದ್ದು, ಇದೊಂದು ವಿಚಿತ್ರ ಕಥೆ ಅಂತ.

ಇಂತಹ ವಿಚಿತ್ರ ಕಥೆಯನ್ನು ನಾನು ಇದುವರೆಗೆ ಕೇಳಿಲ್ಲ, ಅಂತೂ ಇದು ಸಂಪೂರ್ಣವಾಗಿ ವಿಭಿನ್ನ ಚಿತ್ರ. ಕಥೆಯನ್ನು ಹತ್ತು ಬಾರಿ ಕೇಳಿದರೂ, ನನಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ನಡುವೆ, ತಾನು ನಿರ್ದೇಶಕನೆಂಬುದನ್ನು ಸೆಟ್‌ನಲ್ಲಿ ಮರೆತಿದ್ದೇನೆ ಮತ್ತು ಇಲ್ಲಿ ಕೇವಲ ನಟನಾಗಿ ಪಾತ್ರ ನಿರ್ವಹಿಸಿದ್ದೇನೆ ಎಂದೂ ಉಪ್ಪಿ ಅಂಡರ್‌ಲೈನ್ ಮಾಡಿ ಹೇಳಿದರು.

ಆರಕ್ಷಕ'ನಿಗೆ ತುಪ್ಪದಂತಾ ರಾಗಿಣಿಯ ಜಲಕ್!


'ಆರಕ್ಷಕ'ದ ಗ್ಲಾಮರಸ್ ವೈದ್ಯೆಯ ಪಾತ್ರದಲ್ಲಿ ರಾಗಿಣಿ ನಟಿಸಿದ್ದಾರೆ. ಈಗಾಗಲೇ ಟಾಕಿ ಭಾಗ ಚಿತ್ರೀಕರಣ ಮುಗಿದಿದೆ. ಇನ್ನು ಉಳಿದಿರುವುದು ಹಾಡುಗಳ ಚಿತ್ರೀಕರಣ. ನವೆಂಬರ್ ಹೊತ್ತಿಗೆ ಚಿತ್ರವನ್ನು ತೆರೆಯ ಮೇಲೆ ತರುವ ಯೋಚನೆ ನಿರ್ದೇಶಕ ಕೃಷ್ಣ ಪ್ರಜ್ವಲ್ ಅವರದ್ದು. ಖಂಡಿತಾ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಬೇರೆ ಅವರಿಂದ ಬಂದಿದೆ.

No comments:

Post a Comment