Monday, 1 August 2011

ಜರಾಸಂಧನಿಗೆ ಸೂಪರ್ ಸ್ಟಾರ್ ಉಪೇಂದ್ರ ಹಾಡು


ಸೂಪರ್ ಸ್ಟಾರ್ ಉಪೇಂದ್ರ ಹಾಡುಗಾರನಾಗಿ ಬದಲಾದರೆ? ಈ ಡೌಟು ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಏಕೆಂದರೆ 'ಜೋಗಯ್ಯ' ಚಿತ್ರದಲ್ಲಿ ಉಪ್ಪಿ ಹಾಡಿರುವ ಹಾಡೊಂದು ಸೂಪರ್ ಹಿಟ್ ಆಗಿದೆ. ಅದಾದ ಬಳಿಕ ಮರ್ಯಾದೆ ರಾಮಣ್ಣ ಚಿತ್ರದಲ್ಲೂ ಉಪ್ಪಿ ಗಾನ ಲಹರಿ ಹರಿಸಿದ್ದಾರೆ.

ಈಗ 'ಜರಾಸಂಧ' ಚಿತ್ರಕ್ಕಾಗಿ ನಿರ್ದೇಶಕ ಶಶಾಂಕ್ ಬರೆದಿರುವ ‘ಪದೇ ಪದೇ ಫೋನಿನಲ್ಲಿ ಎಂದು ಆರಂಭವಾಗುವ ಗೀತೆಯನ್ನು ಸೂಪರ್‌ಸ್ಟಾರ್ ಉಪೇಂದ್ರ ಹಾಡಿದ್ದಾರೆ. ನಾಯಕ ವಿಜಯ್ ಅಭಿನಯದ ಚಿತ್ರಕ್ಕೆ ಮೊದಲ ಬಾರಿ ಉಪೇಂದ್ರ ಹಾಡಿದ್ದಾರೆ.

"ನನ್ನ ನಿರ್ದೇಶನದ ಚಿತ್ರಕ್ಕೆ ಉಪೇಂದ್ರ ಅವರು ಹಾಡುತ್ತಿರುವುದು ಇದೇ ಮೊದಲು. ಉಪೇಂದ್ರ ಈ ಗೀತೆಯ ಬಗ್ಗೆ ಮೆಚ್ಚುಗೆ ಸೂಚಿಸಿ, ಸಂತೋಷದಿಂದ ಹಾಡಿದ್ದಾರೆ ಎಂದು ಎಂದು ತಿಳಿಸಿದ್ದಾರೆ ನಿರ್ದೇಶಕ ಶಶಾಂಕ್. ಕರ್ನಾಟಕದ ರಮಣೀಯ ಸ್ಥಳಗಳು, ಚಾಲುಕುಡಿ ಜಲಪಾತ ಹಾಗೂ ವಿದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾತುಗಳ ಜೋಡಣೆ ನಡೆಯುತ್ತಿದೆ. ಸೆಪ್ಟಂಬರ್‌ನಲ್ಲಿ 'ಜರಾಸಂಧ' ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಶ್ರೀಮಂತ್ರಾಲಯ ಕಂಬೈನ್ಸ್ ಲಾಂಛನದಲ್ಲಿ ಬಿ.ಬಸವರಾಜ್ ಹಾಗೂ ಬಿ.ಕೆ.ಗಂಗಾಧರ್ ನಿರ್ಮಿಸುತ್ತಿರುವ 'ಜರಾಸಂಧ' ಚಿತ್ರಕ್ಕೆ ಶಶಾಂಕ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೇಖರ್‌ಚಂದ್ರರ ಛಾಯಾಗ್ರಹಣ, ಅರ್ಜುನ್ ಸಂಗೀತ, ಶ್ರೀ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ಅನಿಲ್ ಅವರ ನಿರ್ಮಾಣ ನಿರ್ವಹಣೆಯಿದೆ. 'ಜರಾಸಂಧ' ಚಿತ್ರದ ತಾರಾಬಳಗದಲ್ಲಿ ವಿಜಯ್, ಪ್ರಣೀತಾ, ದೇವರಾಜ್, ರೂಪಾದೇವಿ, ಜೆ.ಕೆ, ರಂಗಾಯಣ ರಘು, ಸ್ವಯಂವರ ಚಂದ್ರು, ಚೇತನ್ ಮುಂತಾದವರಿದ್ದಾರೆ.

No comments:

Post a Comment