Tuesday 25 September, 2012

ಉಪೇಂದ್ರ ಅಭಿನಯದ ಕಲ್ಪನಾ ಈ ವಾರ ವಸ್ತುಂದಿ!


ಮೈಮೇಲೆ ಪ್ರೇತ ಬಂದವರಂತೆ ನಟಿಸೋದೇ ರಿಯಲ್ ಸ್ಟಾರ್ ಉಪೇಂದ್ರ ಸ್ಟೈಲ್. ಆದರೆ ಯಾವತ್ತೂ ಪ್ರೇತ ಹಿಡಿದವರ ಪಾತ್ರದಲ್ಲಿ ಕಾಣಿಸಿಕೊಂಡವರಲ್ಲ. ಅಂತಹ ಪಾತ್ರದಲ್ಲಿ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿರುವ ಚಿತ್ರವೇ 'ಕಲ್ಪನಾ'. ಅದರಲ್ಲಿ ಉಪ್ಪಿಯದ್ದು ವಿಶಿಷ್ಟ ಪಾತ್ರ.

ಉಪ್ಪಿ ಪಾತ್ರವನ್ನು ಶ್ರುತಿ ಬಣ್ಣಿಸಿರೋದು 'ಗಂಡು ಕಲ್ಪನಾ'. ಮೂಲ ಚಿತ್ರದ ಕಾಮಾಕ್ಷಿ ಪಾತ್ರವನ್ನು ಮಾಡಿರುವ ಶ್ರುತಿ ಹೀಗೆ ಹೇಳಲು ಎರಡು ಕಾರಣಗಳಿವೆ. ಮೊದಲನೆಯದ್ದು, ನಟಿ ಕಲ್ಪನಾ ಜತೆ ಅವರಿಗೆ ನಟಿಸಲು ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ 'ಕಲ್ಪನಾ' ಹೆಸರಿನ ಚಿತ್ರದಲ್ಲಿ ಅಭಿನಯಿಸಿ ಆ ಬಯಕೆಯನ್ನು ಅಷ್ಟೋ ಇಷ್ಟೋ ತೀರಿಸಿಕೊಂಡಿದ್ದಾರೆ. ಎರಡನೇಯದ್ದು ಶ್ರುತಿ 'ಗಂಡು ಕಲ್ಪನಾ' ಎಂದಿರುವುದು ಉಪ್ಪಿ ಪಾತ್ರಕ್ಕೆ.

ಶ್ರುತಿ ಪ್ರಕಾರ, ಇದು ಪೂರ್ತಿಯೆಂದರೆ ಪೂರ್ತಿ ಉಪೇಂದ್ರ ಚಿತ್ರ. ಸುಮಾರು 200 ಚಿತ್ರಗಳಲ್ಲಿ ನಟಿಸಿದ ನಂತರ ಉಪೇಂದ್ರ ಕೂಲ್ ಆಗಬಹುದು, ಅದುವರೆಗೆ ಈ ಅಬ್ಬರ ಇದ್ದೇ ಇರುತ್ತದೆ ಎಂದೂ ಕಿಚಾಯಿಸಿದರು. ಆದರೆ ಉಪ್ಪಿ ಹೇಳೋದೇ ಬೇರೆ. ಚಿತ್ರ ನೋಡಿದ ನಂತರ ಪ್ರೇಕ್ಷಕರ ಮನಸ್ಸಿನಲ್ಲಿ ಶ್ರುತಿ ಮತ್ತು ಉಮಾಶ್ರೀಯವರ ಪಾತ್ರಗಳು ಮಾತ್ರ ಅಚ್ಚಳಿಯದೆ ಉಳಿಯಬಹುದು ಅನ್ನೋದು ಅವರ ಪ್ರಾಮಾಣಿಕ ಅಭಿಪ್ರಾಯ.

ಉಪ್ಪಿ ಇದುವರೆಗೆ ನಟಿಸಿದ ಚಿತ್ರಗಳಲ್ಲಿ 'ಕಲ್ಪನಾ' ಬೇರೆಯೇ ಆಗಿ ನಿಲ್ಲುವ ಚಿತ್ರ. ತಮಿಳಿನ 'ಕಾಂಚನಾ'ದಲ್ಲಿ ರಾಘವ ಲಾರೆನ್ಸ್ ಬೆಚ್ಚಿ ಬೀಳಿಸಿದ್ದ ಪಾತ್ರವನ್ನೇ ಕನ್ನಡದಲ್ಲಿ ರಿಯಲ್ ಸ್ಟಾರ್ ಮಾಡಿದ್ದಾರೆ. ಅಲ್ಲಿ ಸ್ವತಃ ರಾಘವ ಲಾರೆನ್ಸ್ ನಿರ್ದೇಶನವಿತ್ತು, ಆದರೆ ಇಲ್ಲಿ ಹಿರಿಯ ನಿರ್ದೇಶಕ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಣವೂ ಅವರದ್ದೇ.

ಮಂಗಳಮುಖಿಯಾಗಿ ಶರತ್ ಕುಮಾರ್ ಮಾಡಿದ್ದ ಪಾತ್ರ ಕನ್ನಡದಲ್ಲಿ ಸಾಯಿಕುಮಾರ್ ಪಾಲಾಗಿದೆ. ಕೆಲವು ದೃಶ್ಯಗಳಲ್ಲಿ ಸಾಯಿಕುಮಾರ್ ಯಾರು, ಉಪೇಂದ್ರ ಯಾರು ಎಂಬುದು ಗೊತ್ತಾಗದ ರೀತಿಯಲ್ಲಿ ದೃಶ್ಯಗಳು ಮೂಡಿ ಬಂದಿವೆ. ಮಂಗಳಮುಖಿ ಕಲ್ಪನಾ (ಸಾಯಿಕುಮಾರ್) ಸಾವಿನ ನಂತರ ಆಕೆಯ ಪ್ರೇತ ಉಪೇಂದ್ರನ ದೇಹ ಸೇರಿಕೊಳ್ಳುತ್ತದೆ. ಹಾಗಾಗಿ ಕಲ್ಪನಾ ರೀತಿಯಲ್ಲೇ ಉಪೇಂದ್ರ ವರ್ತಿಸುತ್ತಾರೆ. ಕೆಂಪು ಸೀರೆ ಉಟ್ಟುಕೊಂಡ ಇಬ್ಬರದ್ದೂ ಅಬ್ಬರದ ನೃತ್ಯ. ಅವರಿಗೆ ಹೆದರುವ ಪಾತ್ರಗಳಲ್ಲಿ ಶ್ರುತಿ ಮತ್ತು ಉಮಾಶ್ರೀ ಕಾಣಿಸಿಕೊಂಡಿದ್ದಾರೆ.

'ಕಾಂಚನಾ'ದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ರೈ ಅವರೇ ಇಲ್ಲೂ ಇದ್ದಾರೆ. ಉಪ್ಪಿಗೆ ನಾಯಕಿಯಾಗಿರುವುದಕ್ಕಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ನಾಲ್ಕನೇ ಚಿತ್ರ.

ಇತ್ತೀಚೆಗಷ್ಟೇ 'ಕಲ್ಪನಾ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಮೂಲ ಚಿತ್ರದ ಒಂದೆರಡು ಹಾಡುಗಳನ್ನು ಉಳಿಸಿಕೊಂಡು, ಕೆಲವು ಹೊಸ ಮಟ್ಟುಗಳನ್ನು ಹಾಕಿದವರು ವಿ. ಹರಿಕೃಷ್ಣ. ಇನ್ನು ರಾಮ್ ನಾರಾಯಣ್ ಅವರಿಗೆ ಇದು 125ನೇ ಚಿತ್ರ ಅನ್ನೋದು ವಿಶೇಷ.

No comments:

Post a Comment