Monday 4 June, 2012

ಕನ್ನಡದ ಮೊದಲ ಚಿತ್ರ "ಗಾಡ್ ಫಾಧರ್"ಗೆ ರೆಹಮಾನ್ ಸ೦ಭಾವನೆ 1 ಕೋಟಿ!


ಒಂದು ಕೋಟಿನಾ ಎಂದು ಹುಬ್ಬೇರಿಸಬೇಡಿ. ಯಾಕೆಂದರೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಪಾಲಿಗೆ ಕೋಟಿಯೆಂದರೆ ಜುಜುಬಿ. ಅವರು ಒಂದು ಚಿತ್ರಕ್ಕೆ ಸಂಗೀತ ನೀಡಿದರೆ ಹಲವು ಕೋಟಿಗಳನ್ನು ಜೇಬಿಗಿಳಿಸುತ್ತಾರೆ. ಆದರೂ ಕನ್ನಡದಲ್ಲಿ ಬರೀ ಒಂದು ಕೋಟಿಗೆ ಸಂಗೀತ ನೀಡಿದ್ದಾರೆಂದರೆ?

ಹೌದು, ರೆಹಮಾನ್ 'ಗಾಡ್‌ಫಾದರ್' ಚಿತ್ರದ ಸಂಗೀತಕ್ಕೆ ತೆಗೆದುಕೊಂಡಿರುವುದು ಕೇವಲ ಒಂದು ಕೋಟಿ. ಇದನ್ನು ನಿರ್ಮಾಪಕ ಕೆ. ಮಂಜು ಕೂಡ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಪ್ರಕಾರ, ಕನ್ನಡದ ಈ ಚಿತ್ರಕ್ಕೆ ರೆಹಮಾನ್ ಸಂಭಾವನೆಯನ್ನೇ ಪಡೆದಿಲ್ಲ. ಉಚಿತವಾಗಿಯೇ ಟ್ಯೂನ್‌ಗಳನ್ನು ಹಾಕಿಕೊಟ್ಟಿದ್ದಾರೆ. ಕೋಟಿ ತೆಗೆದುಕೊಂಡಿರುವುದು ಸ್ಟುಡಿಯೋ ಮತ್ತಿತರ ಖರ್ಚಿಗಾಗಿ!

ಓಹೋ ಎಂದು ಹುಬ್ಬೇರಿಸುವ ಮೊದಲು ಇನ್ನೊಂದು ವಿಷಯ ಗಮನದಲ್ಲಿರಲಿ. ಕನ್ನಡಕ್ಕಾಗಿ ರೆಹಮಾನ್ ಸಂಗೀತ ಸಂಯೋಜಿಸಿರುವುದು ಬರೀ ಎರಡು ಹಾಡುಗಳಿಗಾಗಿ!

ಅಂದರೆ 'ಗಾಡ್‌ಫಾದರ್' ಚಿತ್ರದಲ್ಲಿರುವುದು ಎರಡೇ ಹಾಡೇ? ಅಲ್ಲ, ಈ ಹಿಂದೆ ವರದಿಯಾದಂತೆ ರೆಹಮಾನ್ ಸಂಗೀತದ ತಮಿಳಿನ 'ವರಲಾರು' (ಗಾಡ್‌ಫಾದರ್ ಚಿತ್ರದ ಒರಿಜಿನಲ್) ಚಿತ್ರದ ಐದು ಹಾಡುಗಳನ್ನು ಹಾಗೆಯೇ ಎತ್ತಿಕೊಳ್ಳಲಾಗಿದೆ. ಸ್ವಂತಕ್ಕೆ ಇರುವುದು ಇಲ್ಲಿ ಎರಡು ಹಾಡು ಮಾತ್ರ! ಉಳಿದೆಲ್ಲವೂ ತಮಿಳಿನ ಎರವಲು.

ರೆಹಮಾನ್ ಕನ್ನಡದ 'ಗಾಡ್‌ಫಾದರ್' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಈ ಚಿತ್ರದ ಆಡಿಯೋ ಕಳೆದ ಶನಿವಾರ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮಕ್ಕೆ ಸ್ವತಃ ರೆಹಮಾನ್ ಕೂಡ ಬಂದಿದ್ದರು.

ಹಲೋ.. ಚೆನ್ನಾಗಿದ್ದೀರಾ? ಎಂದೇ ಮಾತು ಆರಂಭಿಸಿದ ರೆಹಮಾನ್, ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಹಂಸಲೇಖ, ವಿಜಯ್ ಆನಂದ್ ಮುಂತಾದವರ ಜತೆ ಕೆಲಸ ಮಾಡಿರುವುದನ್ನೂ ನೆನಪಿಸಿಕೊಂಡರು.

1 comment: