Thursday 12 April, 2012

250 ಕಡೆ ಉಪ್ಪಿ 'ಕಠಾರಿ ವೀರ' ರಿಲೀಸ್!


'ರಕ್ತಕಣ್ಣೀರು'ವಿನಂತಹ ಸೂಪರ್ ಹಿಟ್ ಚಿತ್ರ ನಿರ್ಮಿಸಿದ ನಿರ್ಮಾಪಕರ ಸಂಘದ ಅಧ್ಯಕ್ಷ ರಚ್ಚೆ ಹಿಡಿದಿದ್ದಾರೆ. ಅಣ್ಣಾ ಬಾಂಡ್ ಇರಲಿ, ಗಾಡ್‌ಫಾದರ್ ಇರಲಿ, ಯಾವುದಕ್ಕೂ ಕ್ಯಾರೇ ಮಾಡುವುದಿಲ್ಲ ಅಂತ ಧುಮುಕಿರುವ ಅವರು ಬರೋಬ್ಬರಿ 250 ಥಿಯೇಟುಗಳಲ್ಲಿ 'ಕಠಾರಿ ವೀರ ಸುರಸುಂದರಾಂಗಿ' ಬಿಡುಗಡೆ ಮಾಡೋದಾಗಿ ಘೋಷಿಸಿದ್ದಾರೆ.

250 ಚಿತ್ರಮಂದಿರಗಳೆಂದರೆ ಸುಲಭದ ಮಾತಲ್ಲ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಕರ್ನಾಟಕದಲ್ಲಿ 150 ಚಿತ್ರಮಂದಿರಗಳ ಆಸುಪಾಸಿನಲ್ಲಷ್ಟೇ ಬಿಡುಗಡೆಯಾಗುತ್ತವೆ. ಕೆಲವು ನಿರ್ಮಾಪಕರು ದೊಡ್ಡ ಸ್ಟಾರುಗಳ ಚಿತ್ರಗಳನ್ನೂ 70-80ಕ್ಕೆ ಸೀಮಿತಗೊಳಿಸುವುದೂ ಇದೆ. ಹಾಗಿರುವಾಗ ಮುನಿರತ್ನ 250ಕ್ಕೆ ಹಾಕಿದ್ದಾರೆ.

ಕನ್ನಡದ ಮೊದಲ 3ಡಿ ಚಿತ್ರ ಎಂಬ ಹೆಗ್ಗಳಿಕೆಯಿರುವ 'ಕಠಾರಿ ವೀರ ಸುರಸುಂದರಾಂಗಿ' 3ಡಿ ಸೌಲಭ್ಯದೊಂದಿಗೆ ಬಿಡುಗಡೆಯಾಗುವ 22 ಚಿತ್ರಮಂದಿರಗಳನ್ನು ಈಗಾಗಲೇ ಮುನಿರತ್ನ ಗುರುತಿಸಿದ್ದಾರೆ. ಇದಕ್ಕೆ ಇನ್ನೂ 40 ಥಿಯೇಟರುಗಳು ಸೇರಿಕೊಳ್ಳಲಿವೆ. ಅಲ್ಲಿಗೆ ಹೆಚ್ಚು ಕಡಿಮೆ 60 ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಈ ಚಿತ್ರವನ್ನು 3ಡಿ ಮ್ಯಾಜಿಕ್‌ನೊಂದಿಗೆ ನೋಡಬಹುದು. ಉಳಿದೆಡೆ ಮಾಮೂಲಿ 2ಡಿ.

ಕನ್ನಡಕ ಬೇಕೇ ಬೇಕು..

3ಡಿ ಸಿನಿಮಾವೆಂದರೆ, ಅದನ್ನು ನೋಡಲು 3ಡಿ ಕನ್ನಡಕ ಬೇಕೇ ಬೇಕು. ಥಿಯೇಟರುಗಳು ಜಾಸ್ತಿಯಾದಷ್ಟು ಖರ್ಚೂ ಜಾಸ್ತಿ. ಆದರೆ ಮುನಿರತ್ನ ಸೋಲಲು ರೆಡಿಯಿಲ್ಲ. ಎಷ್ಟು ಸಾಧ್ಯವಾಗುತ್ತೋ, ಅಷ್ಟು ಚಿತ್ರಮಂದಿರಗಳಲ್ಲಿ 3ಡಿ ಅನುಭವವನ್ನೇ ಉಣ ಬಡಿಸಲು ರೆಡಿಯಾಗಿರುವ ಅವರೀಗ, ಹೆಚ್ಚು ಕಡಿಮೆ 60 ಚಿತ್ರಮಂದಿರಗಳಲ್ಲಿ 3ಡಿ ವ್ಯವಸ್ಥೆ ಮಾಡುತ್ತಿದ್ದಾರೆ. ಅದಕ್ಕಾಗಿ ಮಲೇಷಿಯಾದಿಂದ 3ಡಿ ಕನ್ನಡಕಗಳನ್ನು ಬಾಡಿಗೆಗೆ ತರುತ್ತಿದ್ದಾರೆ.

ಟಿಕೆಟ್ ದರ ಹೆಚ್ಚಳ...

3ಡಿ ಚಿತ್ರೀಕರಣವೆಂದರೆ ಸುಲಭವಲ್ಲ. ಅದರ ಪರಿಕರ, ಕ್ಯಾಮರಾಗಳೇ ಬೇರೆ. ಹೀಗೆ 3ಡಿ ಶೂಟಿಂಗ್ ನಡೆಸಲು ಬರೋಬ್ಬರಿ 9 ಕ್ಯಾಮರಾಗಳನ್ನು 'ಕಠಾರಿ..' ಟೀಮ್ ಬಳಸಿದೆ. ಒಟ್ಟು 15 ಕೋಟಿ ರೂಪಾಯಿಗಳನ್ನು ಮುನಿರತ್ನ ಸುರಿದಿದ್ದಾರೆ. ಅಂದ ಮೇಲೆ ಟಿಕೆಟ್ ದರ ಜಾಸ್ತಿ ಮಾಡದೇ ಇರುವುದಾದರೂ ಹೇಗೆ? ಆದರೂ ಪ್ರೇಕ್ಷಕರಿಗೆ ಹೊರೆಯಾಗದಂತೆ ಶೇ.25ರಷ್ಟು ಮಾತ್ರ ಟಿಕೆಟ್ ದರ ಹೆಚ್ಚಿಸೋದಾಗಿ ಮುನಿರತ್ನ ಹೇಳಿದ್ದಾರೆ. ಅಂದರೆ, 100 ರೂಪಾಯಿ ಟಿಕೆಟ್ ದರ ಇರುವ ಚಿತ್ರಮಂದಿರಗಳಲ್ಲಿ 125 ರೂಪಾಯಿ!

ಏಪ್ರಿಲ್ 19ಕ್ಕೆ ಆಡಿಯೋ...

ಚಿತ್ರ ಬಿಡುಗಡೆ ಏಪ್ರಿಲ್ 27ಕ್ಕೆ, ಆಡಿಯೋ ಬಿಡುಗಡೆ ಏಪ್ರಿಲ್ 19ಕ್ಕೆ. ಹೀಗೆ ಎಲ್ಲವನ್ನೂ ಪಕ್ಕಾ ಮಾಡಿದ್ದಾರೆ ಮುನಿರತ್ನ. ಕನ್ನಡದ ನಂ.1 ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಸಂಗೀತವಿರುವ ಆಡಿಯೋ ಏಪ್ರಿಲ್ 19ರಂದು ಬೆಂಗಳೂರಿನ ಗಾಯತ್ರಿ ವಿಹಾರ ಹಾಲ್‌ನಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಏರ್ಪಡಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಡಬ್ಬಿಂಗ್‌ಗೆ ಭಾರೀ ಬೇಡಿಕೆ...

ಭಾರತದಲ್ಲಿ 3ಡಿ ಸಿನಿಮಾಗಳು ಬರೋದೇ ಅಪರೂಪ. ಹಾಗಿರುವಾಗ ಕನ್ನಡದಲ್ಲಿ 3ಡಿ ಬಂತೆಂದರೆ ಅದು ಸುಮ್ಮನೆ ಮಾತಲ್ಲ. ಹಾಗನ್ನುತ್ತಿರುವ ಮುನಿರತ್ನ ಮಾತನ್ನೇ ನಂಬುವುದಾದರೆ, ಈಗಾಗಲೇ ಹಲವು ಮಂದಿ 'ಕಠಾರಿ...' ಡಬ್ಬಿಂಗ್ ಹಕ್ಕಿಗಾಗಿ ಮುಗಿ ಬಿದ್ದಿದ್ದಾರೆ. ಅವರಲ್ಲಿ ಪ್ರಮುಖವಾಗಿರುವವರು ಕೇರಳದ ಇಬ್ಬರು ನಿರ್ಮಾಪಕರಂತೆ. ಯಾವುದೇ ಭಾಷೆಯ ಬಿಗ್ ಸ್ಟಾರ್ ಸಿನಿಮಾಕ್ಕೂ ಪೈಪೋಟಿ ನೀಡುವಷ್ಟು ಈ ಚಿತ್ರ ಚೆನ್ನಾಗಿದೆ ಎಂದು ಎದೆ ತಟ್ಟಿಕೊಂಡೇ ಹೇಳುತ್ತಿದ್ದಾರೆ ಮುನಿರತ್ನ. ಡಬ್ಬಿಂಗ್ ಹಕ್ಕುಗಳನ್ನು ಇನ್ನೂ ಯಾರಿಗೂ ನೀಡುವ ನಿರ್ಧಾರ ಮಾಡಿಲ್ಲವಂತೆ.

ಬಿಡುಗಡೆಗೆ ಇನ್ನು ಕಾಯಲ್ಲ..

ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ ಎಂಬ ಮಾತ್ರಕ್ಕೆ, 'ಗಾಡ್‌ಫಾದರ್' ಚಿತ್ರಕ್ಕೆ ನಾವು ಬಿಡುಗಡೆಗೆ ಅನುವು ಮಾಡಿಕೊಡಬೇಕೇ? ಅಂದರೆ ಉಪೇಂದ್ರ ನಾಯಕರಾಗಿರುವ ಇತರ ಚಿತ್ರಗಳ ನಿರ್ಮಾಪಕರು ಆ ಕಾರಣಕ್ಕಾಗಿ ಕಾಯಬೇಕೇ? ಹೀಗಂತ 'ಗಾಡ್‌ಫಾದರ್' ನಿರ್ಮಾಪಕ ಕೆ. ಮಂಜುವನ್ನು ತರಾಟೆಗೆ ತೆಗೆದುಕೊಂಡಿರುವ ಮುನಿರತ್ನ, 'ಕಠಾರಿ..' ಬಿಡುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ನಿಖಿತಾ ನಿಷೇಧ ಕೆದಕಿದರು..

ಮಂಜುವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಸಾಗಿದ ಮುನಿರತ್ನ, ಒಂದು ಹಂತದಲ್ಲಿ ಮತ್ತೆ ನಿಖಿತಾ ವಿವಾದವನ್ನು ಕೆದಕಿದರು. ಅಂದು ದರ್ಶನ್ ವಿಚಾರದಲ್ಲಿ ನಾವು (ನಿರ್ಮಾಪಕರ ಸಂಘ) ನಿಖಿತಾ ಮೇಲೆ ನಿಷೇಧ ಹೇರಿದಾಗ, ಇದೇ ಮಂಜು ಆಕೆಯ ಪರವಾಗಿ ನಿಂತಿದ್ದರು. ಆಗ ನಾನೇ ಅವರ ಪತ್ನಿಗೆ ಫೋನ್ ಮಾಡಿ, ಆತನನ್ನು ಹದ್ದುಬಸ್ತಿನಲ್ಲಿಡುವಂತೆ ಹೇಳಿದ್ದೆ. ಆ ಮನುಷ್ಯನದ್ದು ಒನ್ ವೇ ಟ್ರಾಫಿಕ್. ಇನ್ನೊಂದು ಕಡೆ ಏನಾಗುತ್ತಿದೆ ಎಂಬುದರ ಬಗ್ಗೆ ಯೋಚನೆ ಮಾಡುವುದೇ ಇಲ್ಲ ಎಂದರು.

1 comment: